ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳು ಕೂಡ ಮನಬಂದಂತೆ ಡೆಂಗ್ಯೂ ಟೆಸ್ಟಿಂಗ್‌ಗೆ ಬೆಲೆ ವಿಧಿಸದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸಚಿವರ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಡೆಂಗ್ಯೂ ಟೆಸ್ಟಿಂಗ್ ಗೆ ದರ ನಿಗದಿಪಡಿಸಿದೆ.ಎರಡು ರೀತಿಯ ಟೆಸ್ಟಿಂಗ್ ಗಳಿಗೆ ಒಟ್ಟು 600 ರೂ. ದರ ನಿಗದಿ ಮಾಡಿ ಆದೇಶಿಸಿದೆ. NS1 ಹಾಗೂ Igm ಎರಡು ಟೆಸ್ಟಿಂಗ್ ಗಳಿಗೆ ತಲಾ 300 ರೂ ಗಳನ್ನ ನಿಗದಿಪಡಿಸಲಾಗಿದೆ.

ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ರೋಟರಿಗಳು ಡೆಂಗಿ ಟೆಸ್ಟಿಂಗ್ ಮಾಡಲು 600 ರೂಪಾಯಿಗಿಂತ ಹೆಚ್ಚು ವಿಧಿಸುವಂತಿಲ್ಲ.

ಡೆಂಗ್ಯೂ ನಿಯಂತ್ರಣ ಮುಂಜಾಗೃತಾ ಕ್ರಮಗಳ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ವಿಡಿಯೋ ಕಾನ್ನರೆನ್ಸ್ ಸಭೆ ನಡೆಸಲಿದ್ದಾರೆ.