ಬೆಂಗಳೂರು: ಗ್ರೇಟರ್ ಬೆಂಗಳೂರಿನ ಬಗ್ಗೆ ಮಾಸ್ಟರ್ ಪ್ಲಾನ್ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಮುಂದಿನ ವಾರ ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬಿಬಿಎಂಪಿ ಅಧಿಕಾರಿಗಳ ಸಭೆ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.

ನಿಮ್ಮ ಕನಸಿನ ಯೋಜನೆಯಾದ ಗ್ರೇಟರ್ ಬೆಂಗಳೂರಿಗಾಗಿ ಬಿಬಿಎಂಪಿ ವಿಭಜನೆ ಮಾಡಲಾಗುವುದೇ ಎಂದು
ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ

“ಯಾವ ಬಿಬಿಎಂಪಿಯನ್ನು ಒಡೆಯುವುದಿಲ್ಲ. ಈಗ ಎಲ್ಲವನ್ನು ಹೇಳಲು ಆಗುವುದಿಲ್ಲ. ಸಭೆ ಸೇರಿದ್ದು ಕೇವಲ ಗ್ರೇಟರ್ ಬೆಂಗಳೂರು ವಿಚಾರಕ್ಕಲ್ಲ. ಚುನಾವಣೆ ಇದ್ದ ಕಾರಣ, ಕಳೆದ ನಾಲ್ಕು ತಿಂಗಳುಗಳಿಂದ ಅನೇಕ ಕೆಲಸಗಳು ಬಾಕಿ ಉಳಿದಿದ್ದವು. ಈ ವಿಚಾರವಾಗಿ ಚರ್ಚೆ ಮಾಡಲು ಸಭೆ ಸೇರಲಾಗಿತ್ತು” ಎಂದು ಹೇಳಿದರು.

ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ಬಗ್ಗೆ ಕೇಳಿದಾಗ “ಇದರ ಬಗ್ಗೆ ಆನಂತರ ಚರ್ಚೆ ಮಾಡುತ್ತೇನೆ. ಚನ್ನಪಟ್ಟಣ ಚನ್ನಪಟ್ಟಣದಲ್ಲಿಯೇ ಇರುತ್ತದೆ, ರಾಮನಗರ ರಾಮನಗರದಲ್ಲಿ ಇರುತ್ತದೆ, ಮಾಗಡಿ ಮಾಗಡಿಯಲ್ಲಿ ಇರುತ್ತದೆ, ಕನಕಪುರ ಕನಕಪುರದಲ್ಲಿಯೇ ಇರುತ್ತದೆ” ಎಂದರು.