ಲಕ್ನೋ: ಅಯೋಧ್ಯೆ ರಾಮ ಮಂದಿರದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಅರ್ಚಕರ ಸಮವಸ್ತ್ರ ಮತ್ತು ಬಣ್ಣ ಬದಲಾಗಿದೆ. ಅರ್ಚಕರು ದೇವಾಲಯಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಗರ್ಭಗುಡಿಯ ಪುರೋಹಿತರು ಕೇಸರಿ ಬಟ್ಟೆಗಳನ್ನು ಅಂದರೆ ಕೇಸರಿ ಪೇಟ, ಕೇಸರಿ ಕುರ್ತಾ ಮತ್ತು ಧೋತಿ ಧರಿಸುತ್ತಿದ್ದರು. ಇದೀಗ ಪುರೋಹಿತರು ಹಳದಿ (ಪಿತಾಂಬರಿ) ಬಣ್ಣದ ಧೋತಿ, ಅದೇ ಬಣ್ಣದ ಕುರ್ತಾ ಮತ್ತು ಪೇಟ ಧರಿಸುತ್ತಿದ್ದಾರೆ.

ಹೊಸ ಡ್ರೆಸ್‌ ಕೋಡ್‌ ಜುಲೈ 1ರಿಂದಲೇ ಜಾರಿಗೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಪುರೋಹಿತರಿಗೆ ಹಳದಿ ಪೇಟ ಕಟ್ಟಲು ತರಬೇತಿ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಹೇಗಿದೆ ಹೊಸ ಸಮವಸ್ತ್ರ?
‘ಚೌಬಂದಿ’ ಎಂದು ಕರೆಯಲ್ಪಡುವ ಹೊಸ ಕುರ್ತಾದಲ್ಲಿ ಯಾವುದೇ ಬಟನ್‌ ಇರುವುದಿಲ್ಲ ಮತ್ತು ಅದನ್ನು ಕಟ್ಟಲು ದಾರವನ್ನು ಬಳಸಲಾಗುತ್ತದೆ. ಹಳದಿ ಬಣ್ಣದ ‘ಧೋತಿ’ಯನ್ನು ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತದೆ. ಇದು ಪಾದವನ್ನೂ ಮುಚ್ಚಲಿದೆ. ದೇವಾಲಯದಲ್ಲಿ ಮುಖ್ಯ ಅರ್ಚಕರು ಮತ್ತು ನಾಲ್ವರು ಸಹಾಯಕ ಅರ್ಚಕರು ಇದ್ದಾರೆ. ಈಗ ಪ್ರತಿ ಸಹಾಯಕ ಪುರೋಹಿತರೊಂದಿಗೆ ಐವರು ಪುರೋಹಿತರು ತರಬೇತಿ ಪಡೆಯುತ್ತಿದ್ದಾರೆ.

ಪುರೋಹಿತರ ಪ್ರತಿ ತಂಡವು ಮುಂಜಾನೆ 3.30ರಿಂದ ರಾತ್ರಿ 11ರವರೆಗೆ ಪಾಳಿಯಲ್ಲಿ ಐದು ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದೆ. ʼʼರಾಮ ಮಂದಿರದಲ್ಲಿ ಅರ್ಚಕರಿಗೆ ಹೊಸ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ. ಈಗ ಮುಖ್ಯ ಅರ್ಚಕರು, ನಾಲ್ವರು ಸಹಾಯಕ ಪುರೋಹಿತರು ಮತ್ತು 20 ತರಬೇತಿ ಪುರೋಹಿತರು ಸೇರಿದಂತೆ ಎಲ್ಲ ಪುರೋಹಿತರು ಹಳದಿ ಬಣ್ಣದ ತಲೆಯ ಸಫಾ, ಚೌಬಂದಿ ಮತ್ತು ಧೋತಿ ಧರಿಸಲಿದ್ದಾರೆ” ಎಂದು ರಾಮ ಮಂದಿರದ ಸಹಾಯಕ ಅರ್ಚಕ ಸಂತೋಷ್ ಕುಮಾರ್ ತಿವಾರಿ ತಿಳಿಸಿದ್ದಾರೆ.

ಕಾರಣವೇನು?
ಏಕರೂಪತೆಯನ್ನು ಕಾಪಾಡಿಕೊಳ್ಳಲು ಮತ್ತು ಭದ್ರತೆಯನ್ನು ಖಚಿತಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅರ್ಚಕರು ತಮ್ಮ ಫೋನ್‌ಗಳನ್ನು ದೇವಾಲಯಗಳಿಗೆ ಕೊಂಡೊಯ್ಯುವುದನ್ನು ನಿಷೇಧಿಸಿದ್ದು ಕೂಡ ಭದ್ರತಾ ಕ್ರಮದ ಒಂದು ಭಾಗ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗೆ ದೇವಾಲಯದ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ನಿಯಮ ಜಾರಿಗೊಳಿಸಿದ್ದಾರೆ.