ಬೆಳಗಾವಿ: ಕೆಲ ದಶಕಗಳಿಂದ ಕರ್ನಾಟಕ ಮತ್ತು ಗೋವಾ ನಡುವೆ ವಿವಾದಕ್ಕೆ ಕಾರಣವಾಗಿರುವ ಮಹದಾಯಿ ಯೋಜನೆ ಮತ್ತೆ ಕಿಡಿ ಹೊತ್ತಿಸಿದೆ. ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಗೋವಾ ಸರಕಾರದ ಒತ್ತಡಕ್ಕೆ ಮಣಿದಿರುವ ಕೇಂದ್ರ ಪ್ರವಾಹ (ನೀರು ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ)ಸಂಸ್ಥೆಯ ನಿಯೋಗ ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಮಹದಾಯಿ ನದಿ ಜಲಾನಯನ ಪ್ರದೇಶ ಪರಿಶೀಲಗೆ ಮುಂದಾಗಿದೆ.

ಇಂದು ಕಳಸಾ-ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಲಿದೆ. ಮಹದಾಯಿ ಯೋಜನೆ ಅಡಿ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ವಿವಿಧ ಕಾಮಗಾರಿ ಕೈಗೊಳ್ಳುತ್ತಿದ್ದು ತನ್ನ ರಾಜ್ಯಕ್ಕೆ ಮಹದಾಯಿ ನದಿಯನ್ನು ತಿರುಗಿಸಿದರೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿನ ದಟ್ಟ ಅರಣ್ಯ ಪ್ರದೇಶದ ಸಸ್ಯ ಹಾಗೂ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಗೋವಾ ಸರಕಾರ ಪ್ರವಾಹ ಸಂಸ್ಥೆಗೆ ಮನವಿ ಮಾಡಿದೆ. ಈ ಹಿನ್ನಲೆಯಲ್ಲಿ ಗೋವಾ ಗಡಿಯಲ್ಲಿರುವ ಸುರಲ್ ನಾಲಾ ಬಳಿಯ ಕಳಸ ಯೋಜನೆಯ ಉದ್ದೇಶಿತ ಸ್ಥಳಕ್ಕೆ ಹಾಗೂ ಕರ್ನಾಟಕ ಗಡಿಯ ಕಳಸಾ ಮತ್ತು ಬಂಡೂರಿ ನಾಲಾ ಪ್ರದೇಶಗಳಿಗೆ ಪ್ರವಾಹ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.