ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಜುಲೈ 22ರಂದು ಆರಂಭವಾಗಲಿದ್ದು, ಜುಲೈ 23 ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ ಎಂದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಪ್ರಕಟಿಸಿದ್ದಾರೆ.

ಜುಲೈ 22 ರಂದು ಆರಂಭವಾದ ಬಜೆಟ್ ಅಧಿವೇಶನ ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು 2024ರ ಬಜೆಟ್ ಅಧಿವೇಶನಕ್ಕಾಗಿ ಜುಲೈ 22 ರಿಂದ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ (ಸಂಸದೀಯ ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟಿರುತ್ತದೆ ) ಕೇಂದ್ರ ಬಜೆಟ್ 2024-25 ಅನ್ನು ಲೋಕಸಭೆಯಲ್ಲಿ ಜುಲೈ 23ರಂದು ಮಂಡಿಸಲಾಗುವುತ್ತದೆ ಎಂದು ಸಚಿವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲೋಕಸಭೆ ಚುನಾವಣೆಗಿಂತ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು. ಅವರು ತಮ್ಮ ಸತತ ಏಳನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ, ಮೊರಾರ್ಜಿ ದೇಸಾಯಿ ಅವರು ನಿರ್ಮಿಸಿದ ಹಿಂದಿನ ದಾಖಲೆಯನ್ನು ಮುರಿದು, ಭಾರತದ ಇತಿಹಾಸದಲ್ಲಿ ಹೆಚ್ಚು ಬಜೆಟ್‌ ಮಂಡಿಸಿದ ಮೊದಲ ಹಣಕಾಸು ಮಂತ್ರಿಯಾಗಲಿದ್ದಾರೆ. 1959 ರಿಂದ 1964 ರವರೆಗೆ ಭಾರತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಮೊರಾರ್ಜಿ ದೇಸಾಯಿ ಅವರು ಈ ಹಿಂದೆ ಐದು ಪೂರ್ಣ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್‌ ಮಂಡಿಸಿದ ದಾಖಲೆಯನ್ನು ಹೊಂದಿದ್ದರು. ಅವರ ಅಧಿಕಾರಾವಧಿಯು ಭಾರತೀಯ ಆರ್ಥಿಕ ಇತಿಹಾಸದಲ್ಲಿ ದೀರ್ಘಕಾಲದ ಮಾನದಂಡವನ್ನು ಸ್ಥಾಪಿಸಿತು, ಐವತ್ತು ವರ್ಷಗಳ ಕಾಲ ಯಾವುದೇ ಹಣಕಾಸು ಮಂತ್ರಿ ಮಂಡಿಸಿದ ಅತಿ ಹೆಚ್ಚು ಬಜೆಟ್‌ಗಳ ದಾಖಲೆ ಇದಾಗಿತ್ತು.

ಈಗ ನಿರ್ಮಲಾ ಸೀತಾರಾಮನ್‌ ಆ ದಾಖಲೆಯನ್ನು ಮುರಿಯಲಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೂರನೇ ಅವಧಿಯಲ್ಲಿ ಮಂಡಿಸುವ ಮೊದಲ ಬಜೆಟ್ ಇದಾಗಿದೆ. ಅಲ್ಲದೆ, ಬಿಜೆಪಿಗೆ ಸ್ವಂತ ಬಹುಮತವಿಲ್ಲದ ಮೊದಲ ಬಜೆಟ್ ಇದಾಗಿದೆ. ಬಜೆಟ್‌ನಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಮಧ್ಯಮ ಮತ್ತು ಸಂಬಳದ ವರ್ಗಗಳಿಗೆ ಅನೂಕಲವಾಗುವಂತೆ ಆದಾಯ ತೆರಿಗೆ ರಚನೆಯಲ್ಲಿ ಬದಲಾವಣೆಯಾಗಬಹುದು ಎಂಬುದು ಒಂದು ದೊಡ್ಡ ನಿರೀಕ್ಷೆಯಾಗಿದೆ.