ಮಂಗಳೂರು : ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಗ ಚಡ್ಡಿ ಗ್ಯಾಂಗ್ ಕಳ್ಳರ ಕಾಟ ಜೋರಾಗಿದೆ. ಈ ಬಗ್ಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ನಾಗರಿಕರು ಸಹ ಎಚ್ಚೆತ್ತುಕೊಂಡಿದ್ದು ಚಡ್ಡಿ ಗ್ಯಾಂಗ್ ಮೇಲೆ ತೀವ್ರ ನಿಗಾ ವಹಿಸಿದ್ದು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲು ಮುಂದಾಗಿದ್ದಾರೆ. ಉಭಯ ಜಿಲ್ಲೆಗಳ ಕೆಲವು ಪೊಲೀಸರು ನಾಗರಿಕರಿಗೆ ಈ ಬಗ್ಗೆ ಅಗತ್ಯ ಸಲಹೆ ಸೂಚನೆಯನ್ನು ರವಾನಿಸಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ಹೈದರಾಬಾದ್ ಮುಂತಾದ ಭಾಗಗಳಿಂದ ಆಗಮಿಸುವ ಈ ಕಳ್ಳರ ಗ್ಯಾಂಗ್ ಈ ಮೊದಲು ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮನೆ ಕಳ್ಳತನ ನಡೆಸಿದೆ.

ಶನಿವಾರ ರಾತ್ರಿ ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಕಲ್ ನ ವಿವೇಕಾನಂದನಗರದಲ್ಲಿ ಮನೆ ಕಳ್ಳತನ ನಡೆದಿದ್ದು, ಇದೇ ತಂಡ ಈ ಕಳ್ಳತನ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ರವಿವಾರ ಕೊಡಿ ಕಾಲ್ ನ ವಿವೇಕಾನಂದ ನಗರದಲ್ಲಿ ಮನೆಯವರು ಮಲಗಿದಾಗ ಕಳ್ಳರು ರವಿವಾರ ನಸುಕಿನ 2.04 ಗಂಟೆ ಸುಮಾರಿಗೆ ಮನೆಯ ಕಿಟಕಿಯ ಸರಳ ಕಿತ್ತು ಮನೆಯ ಕೋಣೆಯನ್ನು ಜಾಲಾಡಿದ್ದಾರೆ. ನಂತರ ಬೆಡ್ ರೂಮ್ ಪ್ರವೇಶಿಸಿದ್ದಾರೆ. ಕಪಾಟಿನಲ್ಲಿದ್ದ ಸುಮಾರು 10 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದು ಘಟನೆ ಮನೆಯವರು ಮರುದಿನ ಎದ್ದ ನಂತರ ಗಮನಕ್ಕೆ ಬಂದಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐದು ಜನ ಕಳ್ಳರು ಇದ್ದರು ಎನ್ನಲಾಗಿದೆ.

ಈ ಘಟನೆ ನಡೆದಿರುವ ಮನೆಯ ಪಕ್ಕದ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನವಲನ ಸೆರೆಯಾಗಿದೆ. ಚಡ್ಡಿ ಧರಿಸಿರುವ ಕಳ್ಳರು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಪ್ರವೇಶಿಸಿದ್ದು ಬೆಳಗ್ಗೆ 2.04 ಕ್ಕೆ ಒಳ ಪ್ರವೇಶಿಸಿ 3.42 ಕ್ಕೆ ವಾಪಸ್ ಆಗಿದ್ದಾರೆ. ಮನೆಯ ಅಕ್ಕಪಕ್ಕ ಇತರ ಮನೆಗಳಿವೆ. ಕಳ್ಳರು ಮನೆಯಿಂದ ಹೊರಗೆ ಬರುವಾಗ ರಸ್ತೆಯಲ್ಲಿ ವಾಹನ ಹಾದುಹೋಗಿದ್ದು ಕಂಡುಬಂದಿದೆ. ಬೊಗಳುತ್ತಿದ್ದ ನಾಯಿಯ ಕಡೆ ಒಬ್ಬ ಕಳ್ಳ ಕಲ್ಲು ಬಿಸಾಡಿರುವುದು ಸಹ ಕೆಮರಾದಲ್ಲಿ ಸೆರೆಯಾಗಿದೆ. ಕಳ್ಳರ ಬಟ್ಟೆ ಗಮನಿಸಿದರೆ ಅದು ಚಡ್ಡಿ ಗ್ಯಾಂಗ್ ಹೋಲುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಡ್ಡಿ ಧರಿಸಿರುವ ಇವರ ತಂಡ, ಬನಿಯನ್ ಧರಿಸಿದ್ದು, ತಲೆ ಮೇಲೆ ಬಟ್ಟೆ ಸುತ್ತಿಕೊಂಡಿದ್ದು ಸೊಂಟದಲ್ಲಿ ಆಯುಧ ಹೊಂದಿರುತ್ತಾರೆ. ಜೋರು ಮಳೆಯಾಗುವ ಸಂದರ್ಭವನ್ನು ಕಳ್ಳತನಕ್ಕೆ ಬಳಸಿಕೊಳ್ಳುವ ಇವರು ಮನೆಯವರು ಗಾಢ ನಿದ್ದೆಯಲ್ಲಿರುವಾಗ ಕಾರ್ಯಾಚರಣೆಗೆ ಇಳಿಯುವ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣಾ ಪ್ರಕಟಣೆ
ಸಾರ್ವಜನಿಕರ ಗಮನಕ್ಕೆ
1. ನಿಮ್ಮ ಗ್ರಾಮದಲ್ಲಿ ಅಂತರರಾಜ್ಯ ಕಳ್ಳರು /ಚಡ್ಡಿ ಗ್ಯಾಂಗ್ /ಮನೆ ಕಳ್ಳತನ ಮಾಡುವವರು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗ್ರತೆಯನ್ನು ವಹಿಸುವುದು.
2. `ಸಾರ್ವಜನಿಕರು ರಾತ್ರಿ ಸಮಯ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳುವುದು.`
3. ತಮ್ಮ ತಮ್ಮ ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೆ ಸೇಫ್ ಲಾಕರ್ ನಲ್ಲಿ ಇಡುವುದು.`
4. `ತಮ್ಮ ಮನೆಯ ಮತ್ತು ವಾಸ್ತವ್ಯದ ಪರಿಸರದಲ್ಲಿ ಇರುವ ಸಿಸಿ ಕ್ಯಾಮರಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವುದು.`
5. `ಯಾವುದೇ ಅಪರಿಚಿತ/ ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರು ಕಂಡು ಬಂದಲ್ಲಿ ಕೂಡಲೇ ತುರ್ತು ಕರೆ ಸೇವೆ 112, ಶಂಕರನಾರಾಯಣ ಪೊಲೀಸ್ ಠಾಣೆ 08259 280299 ಪೊಲೀಸ್ ಉಪನಿರೀಕ್ಷಕರು 9480805456 ಈ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವುದು.
6. `ನಿಮ್ಮ ವಸತಿ / ಬಡಾವಣೆ / ಪರಿಸರದಲ್ಲಿ ದಾರಿ ದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಡಪಡಿಸುವುದು, ಇಲ್ಲದೆ ಇದ್ದಲ್ಲಿ ಮೆಸ್ಕಾಂ ( ಅಗತ್ಯ ಸಹಕಾರ ನಿರೀಕ್ಷಿಸಿದ್ದಲ್ಲಿ ಶಂಕರನಾರಾಯಣ ಠಾಣೆಯ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ )`
7. `ಒಂಟಿ ಮನೆಗಳು/ ಲಾಕ್ಡ್ ಹೌಸ್/ಹಿರಿಯ ನಾಗರೀಕರು / ಮಹಿಳೆಯರು ಮಾತ್ರ ವಾಸ್ತವ್ಯ ಇರುವ ಮನೆಗಳು ಇದ್ದಲ್ಲಿ ಬೀಟ್ ಪೊಲೀಸ್ ರಿಗೆ ಮಾಹಿತಿಯನ್ನು ನೀಡುವುದು.`
ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿ ಈ ಮೂಲಕ ಕೋರಿದೆ.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪೊಲೀಸ್ ಠಾಣೆ,