ಬೆಳಗಾವಿ: ರಾಮದುರ್ಗ ತಾಲೂಕಿನ ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಷೇರುದಾರರು ಮತ್ತು ರೈತರಿಗೆ ಮೋಸ ಮಾಡಿದ್ದು ಜಿಲ್ಲಾಡಳಿತ ಈ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಷೇರುದಾರರು ಹಾಗೂ ರೈತರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಅರಿಹಂತ ಇಂಡಸ್ಟ್ರೀಸ್ ನವರು ನಡೆಸುತ್ತಿದ್ದರು. ಆದರೆ, ಈಗ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಷೇರುದಾರರು, ಕಾರ್ಮಿಕರು ಮತ್ತು ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡ ರೈತರಿಗೆ ಮಾಹಿತಿ ನೀಡದೆ ಹರಾಜು ಮಾಡಿದ್ದಾರೆ. ಜಗದೀಶ ದುಡಗುಂಟಿ ಶುಗರ್ ಲಿಮಿಟೆಡ್ ಗೆ ಕಾರ್ಖಾನೆಯನ್ನು ಹರಾಜು ಮಾಡಿದ್ದು ಷೇರುದಾರರು, ಹಾಗೂ ಕಾರ್ಮಿಕರು ಈಗ ಕಂಗಾಲಾಗಬೇಕಾದ ಸ್ಥಿತಿ ಎದುರಾಗಿದೆ. 75,000 ಶೇರುದಾರರ ಸುಮಾರು 37 ಕೋಟಿ ಹಣವನ್ನು ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು ಮರಳಿ ನೀಡಬೇಕು. 300ಕ್ಕೂ ಅಧಿಕ ಕಾರ್ಮಿಕರಿಗೆ ಮತ್ತೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ, ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಮತ್ತು ಎಸ್ ಪಿ ಭೀಮಾಶಂಕರ ಗುಳೇದ್ ಅವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಿತು. ರೈತರು ಮತ್ತು ಷೇರುದಾರರು ಸಮಸ್ಯೆ ವಿವರಿಸಿದರು. ಮಹಿಳೆಯರು ಷೇರು ಖರೀದಿಸಿದ್ದು ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಕಬ್ಬಿನ ಬಾಕಿ ಬಿಲ್ ಇರುವ ರೈತರು ನ್ಯಾಯಾಲಯಕ್ಕೆ ಹೋಗಿ ಮನವಿ ಸಲ್ಲಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡುವುದಾಗಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ತಿಳಿಸಿದರು.