ಬೆಳಗಾವಿ : ಮಂತ್ರಿಯಾಗಲು ನಾನು ಯಾರ ಕಾಲು ಬೀಳುವ ಮನುಷ್ಯನಲ್ಲ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿಯಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಥಣಿಗೆ ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಇನ್ನೂ ಹತ್ತು ಹಲವು ಕೆಲಸಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ತರುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ಅವರು ಘೋಷಣೆ ಮಾಡಿದರು. ನಾನು ಈ ಹಿಂದೆ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಲವು ಖಾತೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಎಲ್ಲಾ ಖಾತೆಗಳನ್ನು ನಿರ್ವಹಿಸಿದ ಅನುಭವ ನನಗಿದೆ. ಹೀಗಾಗಿ ನನಗೆ ನೀವು ಸಚಿವ ಸ್ಥಾನ ನೀಡದೆ ಇದ್ದರೂ ಅಡ್ಡಿಯಿಲ್ಲ ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಈ ಹಿಂದೆಯೇ ಹೇಳಿದ್ದೇನೆ. ಅಥಣಿ ಮತಕ್ಷೇತ್ರದ ಜನ ನನ್ನನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದಾರೆ. ಅವರಿಗೆ ಹೂವು ತರುವ ಕೆಲಸ ಮಾಡುತ್ತೇನೆಯೇ ಹೊರತು ಹುಲ್ಲು ತರುವ ಕೆಲಸ ಮಾಡಲಾರೆ ಎಂದು ಅವರು ಹೇಳಿದರು.