ಕಾಸರಗೋಡು : ಕೇರಳಕ್ಕೆ ಸೇರಿರುವ ಕಾಸರಗೋಡಿನಲ್ಲಿ ಕನ್ನಡದ ಕಂಪು.ಕರ್ನಾಟಕ,ಮಹಾರಾಷ್ಟ್ರ,ಕೇರಳದ ನಡುವಣ ಗಡಿವಿವಾದ ಪರಿಹಾರಕ್ಕೆ 1966 ರಲ್ಲಿ ಕೇಂದ್ರ ಸರಕಾರ ನೇಮಿಸಿದ ನ್ಯಾ.ಮೂ.ಮೆಹರಚಂದ ಮಹಾಜನ ಆಯೋಗವು ಮಾಡಿದ ಶಿಫಾರಸಿನಂತೆ ಕೇರಳದ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಕಾಸರಗೋಡಿನ ಕನ್ನಡಿಗರು ಕರ್ನಾಟಕಕ್ಕೆ ಸೇರಲು ಈಗಲೂ ಜಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ.ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಸರಗೋಡಿನ ಕನ್ನಡಿಗರು, ಪತ್ರಕರ್ತರು ಈಗಲೂ ಒಗ್ಗಟ್ಟಿನಿಂದ ಕನ್ನಡ ಕಾರ್ಯಕ್ರಮ ನಡೆಸುತ್ತಾರೆ.ಇಂದು ಶನಿವಾರ ಕಾಸರಗೋಡು ಬಳಿಯ ಸೀತಂಗೋಳಿ ಅಲೈಡ್ ಕನ್ವೆನ್ಶನ್ ಹಾಲ್ ನಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಗಡಿ ಅಭಿವೃದ್ಧಿ ಪ್ರಾಧಿಕಾರ,ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ,ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಭಾಗವಹಿಸಿದ್ದರು.ಬೆಳಗಾವಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಸಿ.ಸೋಮಶೇಖರ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಹೊರನಾಡಿನ ಕನ್ನಡಿಗರ ಅಭಿಮಾನ ದೊಡ್ಡದು: ಕೆವಿಪಿ : ಕಾಸರಗೋಡು ಕನ್ನಡಿಗರಿಗೆ ಸರ್ಕಾರ ಧ್ವನಿಯಾಗಿದೆ: ಕೆ.ವಿ.ಪ್ರಭಾಕರ್
ಕಾಸರಗೋಡು: ಕಾಸರಗೋಡು ಕನ್ನಡಿಗರಿಗೆ ಸರ್ಕಾರ ಧ್ವನಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.
ಇಲ್ಲಿ ಪತ್ರಕರ್ತರ ಸಂಘದ ವತಿಯಿಂದ ನಡೆದ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೊರನಾಡಿನ ಕನ್ನಡಿಗರ ಅಭಿಮಾನ ದೊಡ್ಡದು. ವಿಶೇಷವಾಗಿ ಕಾಸರಗೋಡು ಕನ್ನಡಿಗರ ಭಾವನೆ ಅರ್ಥವಾಗುತ್ತದೆ. ನಿಮ್ಮ ಜೊತೆಯಲ್ಲಿ ಕರ್ನಾಟಕ ಸರ್ಕಾರ ಸದಾ ಇದೆ.
ನಿಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗಡಿ ನಾಡಿನ ಕಾಸರಗೊಡು ಪತ್ರಕರ್ತರ ಬಸ್ ಪಾಸ್ ಕೊಡಿಸುವ ಭರವಸೆ ನೀಡಿದ ಕೆ.ವಿ.ಪ್ರಭಾಕರ್ ಅವರು, ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಸಿಎಂ ಜೊತೆಗೆ ಮಾತನಾಡಿ ಅನುದಾನ ಒದಗಿಸುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ನಾವು ರಾಜ್ಯೋತ್ಸವ ಕನ್ನಡಿಗರಾಗಿದ್ದೇವೆ. ಆದರೆ ನೀವು ವರ್ಷದ ಅನುಕಾಲವೂ ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿ ಎಂದರು.
ಕಾಸರಗೋಡು ದತ್ತಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಶಾಸಕ ಎ.ಕೆ.ಎಂ.ಅಶ್ರಫ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕೆಯುಡಬ್ಲ್ಯೂಜೆ ಕೇರಳ ಘಟಕ ಅಧ್ಯಕ್ಷ ಅಬ್ದುಲ್ ರೆಹಮಾನ್ ಸುಬ್ಬಯ್ಯಕಟ್ಟಿ ಮತ್ತಿತರರು ಹಾಜರಿದ್ದರು.