ಪುರಿ : ಒಡಿಶಾ ಸರ್ಕಾರವು 46 ವರ್ಷಗಳ ನಂತರ ಪುರಿಯ ಜಗತ್ಪ್ರಸಿದ್ದ ಜಗನ್ನಾಥ ದೇವಾಲಯದ ಖಜಾನೆ ರತ್ನ ಭಂಡಾರವನ್ನು ಭಾನುವಾರ ತೆರೆಯಲು ಸಜ್ಜಾಗಿದೆ.ಖಜಾನೆಯನ್ನು ಕೊನೆಯ ಬಾರಿ 1978ರಲ್ಲಿ ಅಂದರೆ 46 ವರ್ಷಗಳ ಹಿಂದೆ ತೆರೆಯಲಾಗಿತ್ತು. 12ನೇ ಶತಮಾನದ ದೇಗುಲದ ನಿರ್ವಹಣೆಯನ್ನು ನೋಡಿಕೊಳ್ಳುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ರಿಪೇರಿ ಮಾಡಲು ಅವಕಾಶವನ್ನು ಬಳಸುತ್ತದೆ. ನಾವು ಭಾನುವಾರದಂದು ರತ್ನ ಭಂಡಾರವನ್ನು ತೆರೆಯಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ.ಶ್ರೀ ಜಗನ್ನಾಥ ದೇವಾಲಯದ ಕಾಯ್ದೆಗೆ ಅನುಗುಣವಾಗಿ ಸರ್ಕಾರವು ಹೊರಡಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ದಾರ್ಥ್ ಶಂಕ‌ರ್ ಸ್ಟೈನ್ ಹೇಳಿದ್ದಾರೆ.ಖಜಾನೆಯೊಳಗಿನ ಕಾವಲುಗಾರ ದಾಸಮೋಹಪಾತ್ರ, ಹಾವಿನ ವದಂತಿಗಳನ್ನು ಉದ್ದೇಶಿಸಿ ಅಂತಹ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಶುದ್ದ ಉದ್ದೇಶದಿಂದ ಆಗಮಿಸುವಂತೆ ಜನರನ್ನು ಕೋರಿದರು.ರಾಜ್ಯ ಸರ್ಕಾರವು ರಚಿಸಿರುವ 16 ಸದಸ್ಯರ ಉನ್ನತ ಮಟ್ಟದ ಸಮಿತಿಯು ಜುಲೈ 14ರಂದು ರತ್ನ ಭಂಡಾರವನ್ನು ತೆರೆಯಲು ಶಿಫಾರಸು ಮಾಡಿದೆ.ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ನಾವು ಮೊದಲು ದೇವಾಲಯದೊಳಗೆ ಲೋಕನಾಥ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ವಿಶೇಷ ಸಮಿತಿಯ ಸದಸ್ಯ ಸೌಮೇಂದ್ರ ಮುದುಳಿ ಹೇಳಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕೃತ ಸಿಬ್ಬಂದಿ ಮತ್ತು ಹಾವಾಡಿಗರು ಮೊದಲು ಖಜಾನೆ ಪ್ರವೇಶಿಸುತ್ತಾರೆ ಎಂದು ಮುದುಳಿ ಹೇಳಿದರು.4 ದಶಕದ ಬಳಿಕ ತೆರೆಯಲಿದೆ ಪುರಿ ಜಗನ್ನಾಥನ ರತ್ನಭಂಡಾರ. ಇಲ್ಲಿ 2 ವರ್ಷ ದೇಶದ ಹೊಟ್ಟೆ ತುಂಬಿಸುವಷ್ಟು ಸಂಪತ್ತಿದೆ.ಶತಮಾನಗಳಿಂದ ತೆರೆಯದೇ ಇಟ್ಟಿದ್ದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಆಭರಣ ಹಾಗೂ ಬೆಲೆಬಾಳುವ ಲೋಹಗಳಿರುವ ಈ ತಿಜೋರಿಯನ್ನು ಕೊನೆಯ ಬಾರಿಗೆ 1985 ರಲ್ಲಿ ತೆರೆಯಲಾಗಿತ್ತು. ಮುಖ್ಯಮಂತ್ರಿ ಮೋಹನ್ ಮಾಝಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ರತ್ನ ಭಂಡಾರದಲ್ಲಿರುವ ಅಮೂಲ್ಯ ವಸ್ತುಗಳನ್ನು ದಾಸ್ತಾನು ಮಾಡಲಿದೆ.ಈ ರತ್ನಭಂಡಾರದಲ್ಲಿರುವ ಸಂಪತ್ತಿನಿಂದ ಇಡೀ ದೇಶಕ್ಕೆ ಎರಡು ವರ್ಷಗಳ ಕಾಲ ಉಚಿತ ಊಟ ಒದಗಿಸಬಹುದು ಎಂದು ಹೇಳಲಾಗಿದೆ. ಕಳೆದ ಬಾರಿ ತೆರೆಯಲಾದಾಗ ಭಂಡಾರದಲ್ಲಿ 12,500 ರತ್ನಖಚಿತ ಚಿನ್ನದ ಆಭರಣ ಹಾಗೂ 22,000 ತುಂಡು ಬೆಳ್ಳಿ ಇತ್ತು. 2018ರಲ್ಲಿ ಇದರ ತನಿಖೆ ನಡೆಸುವಂತೆ ನ್ಯಾಯಾಲಯ ಭಾರತದ ಪುರಾತತ್ವ ಇಲಾಖೆಗೆ ಆದೇಶಿಸಿದ್ದಾಗ ಭಂಡಾರದ ಬೀಗದಕೈ ಕಾಣೆಯಾಗಿತ್ತು. ರತ್ನ ಭಂಡಾರವನ್ನು ಹಾವುಗಳು ಕಾಯುತ್ತಿವೆ ಎಂಬ ದಂತಕತೆ ಮತ್ತು ಜಾನಪದ ಕತೆಗಳಲ್ಲಿ ವೇದ್ಯವಾಗಿದ್ದು ಅದು ಈಗಲೂ ಪ್ರಚಲಿತದಲ್ಲಿದೆ. ಹಾಗಾಗಿ ಸಮಿತಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಲು ಮುಂದಾಗಿದೆ. ರತ್ನ ಭಂಡಾರ ತೆರೆಯುವ ವೇಳೆ ನಿಪುಣ ಹಾವಾಡಿಗರನ್ನು ಹಾಗೂ ನುರಿತ ವೈದ್ಯರನ್ನು ಬಳಸಿಕೊಳ್ಳಲು ಈಗಾಗಲೇ ನಿರ್ಧರಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಜಗನ್ನಾಥನ ಕಾರಿಡಾರ್‌ನಲ್ಲಿ ಹಾವುಗಳು ಕೂಡ ಕಂಡು ಬಂದಿದ್ದವು. ಜತೆಗೆ ದೇವಸ್ಥಾನ 12ನೇ ಶತಮಾನದ್ದಾಗಿರುವುದರಿಂದ ಗೋಡೆ ಬಿರುಕುಗಳು, ಬಿಲಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿವೆ. 39 ವರ್ಷಗಳ ಬಳಿಕ ಬಾಗಿಲು ತೆರೆಯುತ್ತಿರುವುದರಿಂದ ಹಾವುಗಳ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲಾಗುತ್ತಿದೆ. ಮೊದಲ ಬಾರಿಗೆ 1805ರಲ್ಲಿ ಪುರಿಯ ಕಲೆಕ್ಟರ್‌ ಆಗಿದ್ದ ಚಾರ್ಲ್ಸ್‌ ಗ್ರೋಮ್‌ ಎಂಬಾತ ಭಂಡಾರದ ಬಾಗಿಲು ತೆರೆದು ಅಲ್ಲಿನ ಧನ-ಕನಕವನ್ನು ಲೆಕ್ಕ ಹಾಕಿದ್ದ. ಜತೆಗೆ ಅಲ್ಲಿನ ಬೆಲೆ ಕಟ್ಟಲಾಗದ ಅಪಾರ ಸಂಪತ್ತನ್ನು ಕಂಡು ದಂಗಾಗಿ ಹೋಗಿದ್ದ. ಆಗ 64 ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದು ಒಂದೊಂದು ಆಭರಣ1.2 ಕೆ.ಜಿ. ತೂಕದ್ದು ಎನ್ನಲಾಗಿದೆ. ಇವು ಅಪರಂಜಿ ಚಿನ್ನ ಮತ್ತು ಹರಳನ್ನು ಹೊಂದಿದ್ದವು. 24 ವಿಧದ ಗೋಲ್ಡ್‌ ಮೊಹರ್‌, 128 ಚಿನ್ನದ ನಾಣ್ಯ, 1297 ಬೆಳ್ಳಿ ನಾಣ್ಯ, 106 ತಾಮ್ರದ ನಾಣ್ಯ ಮತ್ತು 1,333 ವಿಧದ ಬಟ್ಟೆಗಳನ್ನು ಲೆಕ್ಕ ಹಾಕಲಾಗಿತ್ತು. ಸ್ವಾತಂತ್ರ್ಯ ಬಳಿಕ 1950ರಲ್ಲಿ ದೇಗುಲ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು ಆಗ ಹೊರ ಭಂಡಾರದಲ್ಲಿ 150 ಕೆ.ಜಿ. ಬಂಗಾರದ ಆಭರಣಗಳು, ಒಳ ಭಂಡಾರದಲ್ಲಿ 180 ಕೆ.ಜಿ. ಬಂಗಾರದ ಆಭರಣ ಮತ್ತು 146 ಬೆಳ್ಳಿ ವಸ್ತುಗಳನ್ನು ಲೆಕ್ಕ ಹಾಕಲಾಗಿತ್ತು. 1978ರಲ್ಲಿ ಕೊನೆಯದಾಗಿ ರತ್ನ ಭಂಡಾರದ ದಾಸ್ತಾನು ಲೆಕ್ಕ ಹಾಕಿದ್ದು ಆಗ ಎರಡೂ ಚೇಂಬರ್‌ನಲ್ಲಿ 128 ಕೆ.ಜಿ. ತೂಕದ 454 ಬಂಗಾರದ, 221.530 ಕೆ.ಜಿ. ತೂಕದ 293 ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದವು. ಬಳಿಕ 1982 ಮತ್ತು 1985ರಲ್ಲಿ ಈ ರತ್ನ ಭಂಡಾರ ಬಾಗಿಲು ತೆರೆಯಲಾಗಿತ್ತಾದರೂ ಅಲ್ಲಿನ ದಾಸ್ತಾನನ್ನು ಲೆಕ್ಕ ಹಾಕಿರಲಿಲ್ಲ. ಜಗನ್ನಾಥ ದೇವಸ್ಥಾನದ ಉತ್ತರ ಭಾಗದ ಜಗನ್ಮೋಹನ ಎಂಬ ಪ್ರದೇಶದಲ್ಲಿ ಈ ರತ್ನ ಭಂಡಾರವಿದ್ದು ದೇವಾಲಯದ ಮಾದರಿಯನ್ನು ಹೊಂದಿದೆ. ಇದು 11.78 ಮೀಟರ್‌ ಎತ್ತರವಿದ್ದು ಇದರಲ್ಲಿ ಹೊರ ಭಂಡಾರ (ಬಾಹರ್‌ ಭಂಡಾರ್‌), ಒಳ ಭಂಡಾರ (ಭೀತರ್‌ ಭಂಡಾರ್‌) ಎಂಬ ಗೋಪುರಗಳಿವೆ. ಇದರಲ್ಲಿ 5 ಚೇಂಬರ್‌ಗಳಿದ್ದು ಹೊರ ಭಂಡಾರಕ್ಕಿಂತ ಒಳ ಭಂಡಾರ ವಿಶಾಲವಾಗಿದೆ. ಜಗನ್ನಾಥನ ವಾರ್ಷಿಕ ರಥಯಾತ್ರೆಗೆ ಬಳಸುವ ಆಭರಣಗಳು ಹೊರ ಭಂಡಾರದಲ್ಲಿದ್ದು ಒಳ ರತ್ನ ಭಂಡಾರದ 3 ಚೇಂಬರ್‌ಗಳಲ್ಲಿ 15 ಮರದ ಪೆಟ್ಟಿಗೆಗಳ ತುಂಬ ಬರೀ ಬೆಳ್ಳಿ, ಬಂಗಾರ, ರೂಬಿ, ವಜ್ರ ಇತ್ಯಾದಿಗಳ ಅಪರೂಪದ ವಸ್ತುಗಳೇ ತುಂಬಿವೆ ಎನ್ನಲಾಗಿದೆ. ಪುರಿ ರಾಜರು, ಒಡಿಶಾವನ್ನು ಆಳಿದ ರಾಜಮನೆತನಗಳು, ನೇಪಾಲದ ದೊರೆಗಳು ಶ್ರೀ ಜಗನ್ನಾಥನ ಭಕ್ತರಾಗಿದ್ದು ಅವರು ದೇವರಿಗೆ, ದೇವಸ್ಥಾನಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನು ಇಲ್ಲಿಡಲಾಗಿದೆ.2011ರಲ್ಲಿ ಕೇರಳದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಇದೇ ಮಾದರಿಯಲ್ಲಿ ನೆಲಮಾಳಿಗೆಯಲ್ಲಿದ್ದ 1 ಲಕ್ಷ ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.