ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದ ಕೋಣೆಗಖನ್ನು ಬರೋಬ್ಬರಿ 46 ವರ್ಷಗಳ ಬಳಿಕ ತೆರೆಯಲಾಗಿದ್ದು, ಆ ಮೂಲಕ ಹಲವು ವರ್ಷಗಳಿಂದ ಭಕ್ತರಲ್ಲಿ ಹಾಗೂ ದೇಗುಲದ ನಿಗೂಢ ಕೋಣೆಯಲ್ಲಿ ಅಡಗಿರುವ ಕುತೂಹಲಗಳಿಗೆ ತೆರೆ ಬೀಳಲಿವೆ. ಕೇರಳದ ಅನಂತ ಪದ್ಮನಾಭನ ಸಂಪತ್ತಿನ ರೀತಿಯಲ್ಲೇ ಪುರಿ ಜಗನ್ನಾಥ ದೇವಸ್ಥಾನದ ಸಂಪತ್ತು ಇದೆ ಎಂಬ ಮಾತಿದೆ. ಸೀಕ್ರೆಟ್ ಕೋಣೆಯಲ್ಲಿ ಸಾವಿರಾರು ಕೆಜಿ ಚಿನ್ನಾಭರಣ, ಮುತ್ತು, ರತ್ನ, ಹವಳ ಮತ್ತು ಬೆಳ್ಳಿ ಸಾಮಗ್ರಿಗಳಿವೆ ಎನ್ನಲಾಗಿದೆ.ಮಧ್ಯಾಹ್ನ 1:28ರ ಶುಭ ಲಗ್ನದಲ್ಲಿ ರತ್ನ ಭಂಡಾರದ ಬಾಗಿಲು ತೆರೆಯಲಾಗಿದೆ. ಬಳಿಕ ಅಲ್ಲಿದ್ದ ವಿಶೇಷ ಬಾಕ್ಸ್‌ಗಳನ್ನು ದೇಗುಲಕ್ಕೆ ತರಲಾಯಿತು. ಅದರ ಪೂಜ್ಯ ಭಂಡಾರವನ್ನು ಪುನಃ ತೆರೆಯಲು ದೇವಾಲಯವನ್ನು ಪ್ರವೇಶಿಸಿದ 11 ಜನರಲ್ಲಿ ಒರಿಸ್ಸಾದ ಮಾಜಿ ಎಚ್‌ಸಿ ನ್ಯಾಯಾಧೀಶ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಾಲಯದ ಆಡಳಿತ (ಎಸ್‌ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ, ಎಎಸ್‌ಐ ಸೂಪರಿಂಟೆಂಡೆಂಟ್ ಡಿಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ರಾಜನ ಪ್ರತಿನಿಧಿ ಸೇರಿದ್ದಾರೆ.ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದೆ. ಸರ್ಕಾರದ ಅನುಮೋದನೆಯನ್ನು ಪಡೆದ ನಂತರ, ದಾಸ್ತಾನುಗಳಿಗೆ ಮಾರ್ಗದರ್ಶನ ನೀಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಸ್ಥಾಪಿಸಲಾಯಿತು. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ, ಅದರ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದೆ.ಅನಂಗಭೀಮ ದೇವ ಕ್ರಿಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ. ಈತನ ಅಧಿಕಾರದ ಅವಧಿಯಲ್ಲಿ ಪುರಿ ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನವನ್ನು ದಾನವಾಗಿ ನೀಡಿದ್ದ ಎಂಬ ಇತಿಹಾಸ ಇದೆ. 1465ರಲ್ಲಿ ರಾಜ ಕಪಿಲೇಂದ್ರ ದೇವ್‌ ಕೂಡ ಸಾಕಷ್ಟು ಚಿನ್ನವನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖ ಇದೆ.1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯವನ್ನು ಸಮಿತಿ ಲೆಕ್ಕ ಹಾಕಿತ್ತು. ಆದರೆ ಅದರ ಪೂರ್ತಿ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಿರಲಿಲ್ಲ. ಈ ವಿಚಾರ ಕೋರ್ಟ್​ ಮೆಟ್ಟಿಲೇರಿತ್ತು. 2018ರಲ್ಲಿ ಒಡಿಶಾ ಸರ್ಕಾರಕ್ಕೆ ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು.

ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ’ವನ್ನು 46 ವರ್ಷಗಳ ಬಳಿಕ ಇಂದು ತೆರೆಯಲಾಗಿದೆ. ರತ್ನ ಭಂಡಾರ ದೀರ್ಘಕಾಲದಿಂದ ಮುಚ್ಚಿದ್ದರಿಂದ, ದುರಸ್ತಿ ಮಾಡುವ ಉದ್ದೇಶಕ್ಕಾಗಿ ಮಾತ್ರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಭಂಡಾರವನ್ನು ತೆರೆಯಲಾಯಿತು ಎಂದು ಅವರು ಹೇಳಿದ್ದಾರೆ.

ಪ್ರಭು ಜಗನ್ನಾಥರ ಇಚ್ಛೆಯಂತೆ, ಒಡಿಶಾ ಅಸ್ಮಿತೆಯೊಂದಿಗೆ ಒಡಿಯಾ ಸಮುದಾಯವು ಮುನ್ನಡೆಯುವ ಪ್ರಯತ್ನವನ್ನು ಆರಂಭಿಸಿದೆ. ಜಗನ್ನಾಥ ದೇಗುಲದ ನಾಲ್ಕು ದ್ವಾರಗಳನ್ನು ತೆರೆಯಲಾಯಿತು. ಇಂದು ನಿಮ್ಮ ಇಚ್ಛೆಯ ಮೇರೆಗೆ 46 ವರ್ಷಗಳ ನಂತರ ಒಂದು ಮಹತ್ತರ ಉದ್ದೇಶಕ್ಕಾಗಿ ರತ್ನ ಭಂಡಾರವನ್ನು ತೆರೆಯಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 16 ಮಂದಿ ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಜುಲೈ 14ರಂದು ರತ್ನ ಭಂಡಾರವನ್ನು ಮತ್ತೆ ತೆರೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ದೀರ್ಘಕಾಲದಿಂದ ಮುಚ್ಚಿದ್ದರಿಂದ, ಕೇವಲ ರಿಪೇರಿ ಮಾಡುವ ಉದ್ದೇಶಕ್ಕಾಗಿ ಮಾತ್ರ ತೆರೆಯಲಾಗುತ್ತಿದೆ ಎಂದು ಭಗವಾನ್ ಬಲಭದ್ರನ ಮುಖ್ಯ ಸೇವಕ ಹಾಲಧರ್ ದಸ್‌ಮೊಹಾಪಾತ್ರ ಸ್ಪಷ್ಟಪಡಿಸಿದ್ದರು. ಆಭರಣಗಳನ್ನು ತೂಕ ಮಾಡುವ ಬದಲಾಗಿ ಅವುಗಳನ್ನು ಲೆಕ್ಕಹಾಕಿ ಮತ್ತೆ ಸೀಲ್ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರು.
ರತ್ನಭಂಡಾರವು ಮೂರು ಭಾಗಗಳನ್ನು ಒಳಗೊಂಡಿದೆ. ಹೊರ ಕೋಣೆಯಲ್ಲಿ ಸಂಪ್ರದಾಯಕ್ಕೆ ಬಳಸುವ ಆಭರಣಗಳಿದ್ದು, ಒಳಭಾಗದಲ್ಲಿರುವ ಎರಡು ಕೋಣೆಗಳಲ್ಲಿ ಬಳಕೆಯಾಗದ ಆಭರಣಗಳು, ಶತಮಾನಗಳಿಂದ ರಾಜ ಕುಟುಂಬಗಳು, ಭಕ್ತರು ನೀಡಿದ ಆಭರಣ ಒಳಗೊಂಡಿದೆ ಎಂದು ದೇವಸ್ಥಾನದ ಹಿರಿಯ ಸೇವಕರೊಬ್ಬರು ತಿಳಿಸಿದ್ದರು.
ಈ ಭಂಡಾರವನ್ನು 1978ರಲ್ಲಿ ಕೊನೆಯ ಬಾರಿ ತೆರೆಯಲಾಗಿತ್ತು.