ಉಡುಪಿ : ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಪ್ರದಾಯದಂತೆ ಪರ್ಯಾಯ ಶ್ರೀಗಳು ವಾರ್ಷಿಕ ಉದ್ವರ್ತನೆ(ಶುದ್ಧೀಕರಣ) ನೆರವೇರಿಸಿದರು. ಶ್ರೀ ಕೃಷ್ಣ ದೇವರಿಗೆ ಮಳೆಗಾಲದಲ್ಲಿ ನಡೆಯುವ ಮಹಾಭಿಷೇಕಕ್ಕೆ ಮೊದಲು ಕೃಷ್ಣಮಠದ ಗರ್ಭಗುಡಿಯಲ್ಲಿ ಶುದ್ಧೀಕರಣ ನಡೆಸುವುದು ಸಂಪ್ರದಾಯ. ಪರ್ಯಾಯ ಶ್ರೀಗಳು ಮತ್ತು ಇತರ ಮಠಾಧೀಶರು, ಶಿಷ್ಯರು ಗರ್ಭಗುಡಿಯನ್ನು ತೊಳೆದು ಶುದ್ಧೀಕರಣ ನೆರವೇರಿಸುತ್ತಾರೆ. ಕೃಷ್ಣನ ವಿಗ್ರಹವನ್ನು ಬಿದಿರಿನ ಚಾಪೆಯಿಂದ ಮಾಡಲಾದ ಬುಟ್ಟಿಯಿಂದ ಮುಚ್ಚಲಾಗುತ್ತದೆ. ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಮಠದ ಶಿಷ್ಯವರ್ಗದವರೊಂದಿಗೆ ಶುದ್ಧೀಕರಣ ನಡೆಸಿದರು. ಸಂಪ್ರದಾಯದಂತೆ ತಲೆ ಮೇಲೆ ಬಾಳೆ ಎಲೆಯಿಂದ ಮಾಡಿದ ಮುಟ್ಟಾಳೆಯನ್ನು ಧರಿಸಿ ಉದ್ದ ಕೋಲಿಗೆ ತೆಂಗಿನ ಗರಿಯ ಕಡ್ಡಿಯಿಂದ ಪೋಣಿಸಿದ ಪೊರಕೆಯಿಂದ ಸ್ವಚ್ಛಗೊಳಿಸಿದರು. ಶಿಷ್ಯ ವರ್ಗದವರು ಗೋಡೆಗೆ ಅಂಟಿಕೊಂಡಿದ್ದ ತುಪ್ಪದ ದೀಪದ ಜಿಡ್ಡನ್ನು ಉಜ್ಜಿ ತೊಳೆದರು. ಶ್ರೀಪಾದರು ನೀರು ಎರಚುತ್ತ ಸಂಭ್ರಮದಿಂದ ಶುದ್ದೀಕರಣ ನಡೆಸಿದರು. ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.