ಬೆಂಗಳೂರು : ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯಾದ್ಯಂತ ಜು.13ರಂದು ಹಮ್ಮಿಕೊಂಡಿದ್ದ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿದ್ದ, ವಿವಾದ ಪೂರ್ವ ಪ್ರಕರಣಗಳು ಸೇರಿ 40 ಲಕ್ಷ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ರಾಜ್ಯದಲ್ಲಿ ಈವರೆಗೂ ಲೋಕ ಅದಾಲತ್‌ನಲ್ಲಿ ಇಷ್ಟು ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ಇದೇ ಮೊದಲು. ಆ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರ ದಾಖಲೆ ನಿರ್ಮಿಸಿದೆ. ಸೋಮವಾರ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್,
ಇತ್ಯರ್ಥಗೊಂಡಿರುವ ಕೇಸ್‌ಗಳ ಅಂಕಿ-ಅಂಶದ ವಿವರ ನೀಡಿದರು. ಹೈಕೋರ್ಟ್‌ ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯ 17 ನ್ಯಾಯಪೀಠಗಳು ಅದಾಲತ್‌ನಲ್ಲಿ ಕಾರ್ಯ ನಿರ್ವಹಿಸಿ, ರಾಜೀ ಸಂಧಾನದ ಮೂಲಕ 1,655 ಪ್ರಕರಣ, ಜಿಲ್ಲಾ ಮತ್ತು ತಾಲೂಕು ಕೋರ್ಟ್‌ಗಳಲ್ಲಿ ಒಟ್ಟು 40,01,786 ಪ್ರಕರಣ ಇತ್ಯರ್ಥ ಪಡಿಸಿ, ವ್ಯಾಜ್ಯದಾರರಿಗೆ ₹2,640 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.