ಬೆಳಗಾವಿ : ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ರಕ್ತ ಮನುಷ್ಯನಿಂದಲೇ ಪಡೆಯಬೇಕು.ಎಷ್ಟೋ ರೋಗಿಗಳಿಗೆ ಬೇಕಾಗಿರುವ ರಕ್ತದ ಗುಂಪು ಸಿಗದೇ ಸಾಯುವುದನ್ನು ಕಾಣುತ್ತೇವೆ. ರಕ್ತದಾನ ಮಾಡಿ ಜೀವ ಉಳಿಸಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯೂಥ್ ರೆಡ್ ಕ್ರಾಸ್ ದ ನೋಡಲ್ ಅಧಿಕಾರಿ ಡಾ. ಸುಮಂತ ಹಿರೇಮಠ ಕರೆ ನೀಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯೂಥ್ ರೆಡ್ ಕ್ರಾಸ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ ಸಹಯೋಗದೊಂದಿಗೆ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ರಕ್ತವನ್ನು ಮನುಷ್ಯನಿಂದ ಮನುಷ್ಯನು ತೆಗೆದುಕೊಳ್ಳಬೇಕು. ವಿದ್ಯಾರ್ಥಿನಿಯರಲ್ಲಿ ಶೇ. ಐವತ್ತರಷ್ಟು ಮಾತ್ರ ರಕ್ತ ಕೊಡಲು ಅರ್ಹತೆ ಹೊಂದಿದ್ದಾರೆ. ಇದು ಸುಧಾರಣೆ ಆಗಬೇಕು. ಯಾರಿಗೂ ರಕ್ತದಾನ ಮಾಡಲು ಒತ್ತಾಯ ಮಾಡುವುದಿಲ್ಲ. ಆದರೆ ರಕ್ತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಬೇಕು. ರಕ್ತದಾನ ಮಾಡುವುದರಿಂದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಶಂಕರ ತೇರದಾಳ ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿ ರಕ್ತದಾನ ಶಿಬಿರ ಏರ್ಪಡಿಸುತ್ತೇವೆ. ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಾವು ರಕ್ತದಾನ ಮಾಡುವುದರ ಜೊತೆಗೆ ಸಮಾಜದಲ್ಲಿ ಇದರ ಕುರಿತು ಜಾಗೃತಿ ಮೂಡಿಸಬೇಕು. ಸಮಾಜದಲ್ಲಿ ಬದುಕುವ ನಮಗೆ ಸಮಾಜದ ಬಗ್ಗೆ ಕಾಳಜಿ ಕಳಕಳಿ ಇರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಸಿಟಿ ರಕ್ತ ಭಂಡಾರದ ಹಿರಿಯ ವೈದ್ಯ ಡಾ. ಲಕ್ಷ್ಮಣ ಸಿರೂರ್, ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳು ಸ್ವಾಗತಿಸಿದರು.
ವಿದ್ಯಾರ್ಥಿನಿ ಮೀರಾ ನದಾಫ್ ನಿರೂಪಿಸಿದರು. ಶಾಂಭವಿ ಥೋರ್ಲಿ ಪರಿಚಯಿಸಿದರು. ದುರ್ಗಾ ಹೊಸಮನಿ ವಂದಿಸಿದರು. ಬೆಳಗಾವಿಯ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.