ಬೆಳಗಾವಿ :
ಹಳೆ ಪಿಂಚಣಿ ಯೋಜನೆ (ಒಪಿಎಸ್) ಪುನಃ ಜಾರಿಗೆ ತರುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ರಚಿಸಿದ್ದ ಸಮಿತಿಯನ್ನು 10 ದಿನದೊಳಗೆ ಪುನರ್ ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಬಿಜೆಪಿ ಎಸ್.ವಿ. ಸಂಕನೂರು, ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಮುಖ್ಯ ಮಂತ್ರಿಗಳ ಪರವಾಗಿ ಉತ್ತರಿಸಿದ ಅವರು, ಈವರೆಗೆ ಇದ್ದ ಏಕ ಸದಸ್ಯ ಸಮಿತಿಯಿಂದ ಈ ಕಾರ್ಯ ಅಸಾಧ್ಯ ಎಂಬ ಕಾರಣದಿಂದ 4-5 ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಇದಲ್ಲದೇ ಸಿಎಂ ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದು ಮಾಡಿ ಹಿಂದಿನ ಒಪಿಎಸ್ ಜಾರಿ ಮಾಡಿರುವ ರಾಜ್ಯಗಳಲ್ಲಿ ಅಧ್ಯಯನ ಮಾಡಬೇಕು. ಕೇಂದ್ರ ಸರ್ಕಾರದ ಜೊತೆ ಸಭೆ ನಡೆಸುವಂತೆ ಸಲಹೆ ನೀಡಿದ್ದಾರೆ ಎಂದರು.
ಸಮಿತಿ ಪುನರ್ ರಚನೆ ವೇಳೆ ಅದರ ಕಾರ್ಯಗಳನ್ನು ನಿಗದಿಪಡಿಸಲಾಗುವುದು, ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಪಿಂಚಣಿ ಸಿಗದೇ ಇರುವ ಅಂಶವನ್ನು ಸಮಿತಿಯ ಅಧ್ಯಯನಕ್ಕೆ ಒಳಪಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು.
ಪ್ರಮುಖವಾಗಿ ಹಳೆ ಪಿಂಚಣಿ ವ್ಯವಸ್ಥೆ ಅಡಿ ಸರ್ಕಾರ ಪಾವತಿಸಿದ ಭವಿಷ್ಯ ನಿಧಿ (ಪಿಎಫ್) ವಾಪಸ್ ಕೊಡಲು ಕಾನೂನಿನ ಅಡ್ಡಿ ಇದೆ. ಆದರೂ ನೌಕರರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.