ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ ಬಸಗೌಡ ದುಂಡನಗೌಡ ಪಾಟೀಲ ಪುನರಾಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಂಜೀವ ಸದೆಪ್ಪ ಸೋನಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರದಂದು ನಡೆಯಬೇಕಿದ್ದ ಯೂನಿಯನ್ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾದ್ದರಿಂದ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಯೂನಿಯನ್ ಪ್ರಕಟಣೆಯಲ್ಲಿ ತಿಳಿಸಿದೆ.

ಆಡಳಿತ ಮಂಡಳಿಯ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ 14 ಸ್ಥಾನಗಳು ಅವಿರೋಧವಾಗಿ ಆಯ್ಕೆ ನಡೆದರೆ, ಉಳಿದ ಎರಡು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು.
ಅಲ್ಲಿಯೂ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಅಭ್ಯರ್ಥಿಗಳು ಆಯ್ಕೆಯಾಗಿದ್ದರಿಂದ ಎಲ್ಲ 16 ಸ್ಥಾನಗಳು ಬಾಲಚಂದ್ರ ಜಾರಕಿಹೊಳಿಯವರ ಬೆಂಬಲಿಗರಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಬಸಗೌಡ ಪಾಟೀಲ ಅವರು, ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಹಿರಿಯ ಸಹಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೂನಿಯನ್ ಬಲವರ್ಧನೆಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಯೂನಿಯನ್ ಎಲ್ಲ ನಿರ್ದೇಶಕರು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.
ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಜಗ್ಗಿನವರ ನೂತನ ಆಡಳಿತ ಮಂಡಳಿಯನ್ನು ಬರಮಾಡಿಕೊಂಡರು.