ಬೆಳಗಾವಿ: ಕರ್ನಾಟಕ ಮತ್ತು ಗೋವಾ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಗುರುವಾರ ಬೆಳಗಿನ ಜಾವ ಗೋವಾದ ಘಾಟ್ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ದೊಡ್ಡ ಪ್ರಮಾಣದ ಮಣ್ಣಿನ ರಾಶಿ ರಸ್ತೆಗೆ ಬಿದ್ದಿದೆ. ಇದರಿಂದಾಗಿ ಕರ್ನಾಟಕ ಮತ್ತು ಗೋವಾ ನಡುವೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.ಅನುಮೋಡ ಘಾಟ್ ವಿಭಾಗದಿಂದ ಕರ್ನಾಟಕದ ಬೆಳಗಾವಿ ಮತ್ತು ಖಾನಾಪುರ ಭಾಗಕ್ಕೆ ಸಂಚಾರ ಸ್ಥಗಿತಗೊಂಡಿದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.ಗೋವಾ ರಾಜ್ಯದ ದಕ್ಷಿಣ ಭಾಗದ ಗಡಿಯಲ್ಲಿರುವ ಅನಮೋಡ್ ಘಾಟ್ ಪ್ರದೇಶದ ಶ್ರೀ ದೂದಸಾಗರ ದೇವಸ್ಥಾನದ ಬಳಿ ಗುಡ್ಡ ಕುಸಿತ ಆಗಿದೆ. ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಸಿಬ್ಬಂದಿಯಿಂದ ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಸಂಚಾರ ಸಮಸ್ಯೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ ಗೋವಾದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ರವಾನಿಸಿದೆ. ಕಳೆದ ಒಂದು ದಿನದಲ್ಲಿ ಉತ್ತರ ಗೋವಾ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ದಕ್ಷಿಣ ಗೋವಾದ ಪೊಂಡಾ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 190 ಸೆಂಟಿಮೀಟರ್ ಮಳೆ ಬಿದ್ದಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.