ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜುಲೈ 19 ಮತ್ತು 20ರಂದು ಅಂದರೆ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಖಾನಾಪುರ ತಾಲೂಕಿನಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಇದರಿಂದ ನದಿ-ನಾಲೆಗಳು ತುಂಬಿ ಹರಿಯುತ್ತಿವೆ. ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಮಳೆಯಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಶಾಸಕ ವಿಠಲ ಹಲಗೇಕರ  ಅವರು ಖಾನಾಪುರ ತಾಲೂಕಿನ ಶಿಕ್ಷಣಾಧಿಕಾರಿ ರಾಜಶ್ರೀ ಕುಡಚಿ ಅವರಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಶಿಕ್ಷಣಾಧಿಕಾರಿಗಳು ರಜೆ ನೀಡುವ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಖಾನಾಪುರ ತಾಲೂಕಿನ ಸಮಸ್ಯೆ ವಿವರಿಸಿದ್ದರು. ಈ ಹಿನ್ನಲೆಯಲ್ಲಿ ಸುರಿಯುತ್ತಿರುವ ಮಳೆ ಪರಿಸ್ಥಿತಿ ಪರಿಗಣಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ರಜೆ ಘೋಷಣೆ ಮಾಡಿದ್ದಾರೆ.

ಖಾನಾಪುರ ತಾಲೂಕಿನ ಪಶ್ಚಿಮ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಕ್ಕಳಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ ಎಂದು ತಹಸಿಲ್ದಾರ್ ಪ್ರಕಾಶ ಗಾಯಕ್ವಾಡ್ ತಿಳಿಸಿದ್ದಾರೆ.