ಬೆಳಗಾವಿ : ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಕೆಎಲ್ ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯಗಳ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ-2023-24 ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಶುಕ್ರವಾರ ಆರಂಭವಾಯಿತು.

ಕಾನೂನು ಅರಿವು ಹಾಗೂ ಪರಿಸರ ಸಂರಕ್ಷಣೆ ಕುರಿತು ವಿಶೇಷವಾಗಿ ಕಾರ್ಯಕ್ರಮ ಆಯೋಜನೆಯಾದ ಈ
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬೆಳಗಾವಿಯ ಭಾವುರಾವ್ ಕಾಕತ್ಕರ್ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎನ್. ಮಿಸಾಳೆ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಎನ್ಎಸ್ಎಸ್ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಇದು ಸೇವಾ ಮನೋಭಾವವನ್ನು ವಿದ್ಯಾರ್ಥಿ ದಿಸೆಯಲ್ಲೇ ಕಲಿಸಿಕೊಡುತ್ತದೆ. ಕಾನೂನು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದಲ್ಲಿ ವಕೀಲಿ ವೃತ್ತಿಯೊಂದಿಗೆ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜ್ಯೋತಿ ಹಿರೇಮಠ ಮಾತನಾಡಿ, ಬೆಲ್ಲದ ಕಾನೂನು ಮಹಾವಿದ್ಯಾಲಯ ಪ್ರತಿ ವರ್ಷ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಎನ್ಎಸ್ಎಸ್ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಿದೆ. ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಜನರಿಗೆ ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಅವರು ಹೇಳಿದರು.

ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀನಾಕ್ಷಿ ಹಿತ್ತಲಮನಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೇತನ ಆಗಸೇಕರ, ಬೆಲ್ಲದ ಕಾನೂನು ಮಹಾವಿದ್ಯಾಲಯದ ಎನ್ಎಸ್ಎಸ್, ಯೋಜನಾಧಿಕಾರಿ, ಸಹಾಯಕ ಪ್ರಾಧ್ಯಾಪಕ ಮಂಜುನಾಥ ಅಲ್ಲಪ್ಪನವರ, ನ್ಯಾಯವಾದಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ನಿತಿನ್ ರಜಪೂತ ಮತ್ತು ರಾಮಚಂದ್ರ ಕುದ್ರೇಮನಿ , ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜುಲೈ 20 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಸಾಮಾಜಿಕ ಕಾನೂನು ಸಮೀಕ್ಷೆ ಕಾರ್ಯಕ್ರಮವನ್ನು ಬೆಲ್ಲದ ಕಾನೂನು ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಸಂತೋಷ ಪಾಟೀಲ ನಡೆಸಿಕೊಡಲಿದ್ದಾರೆ. ಸಂಜೆ 4 ಕ್ಕೆ ಮನೋಬಲಕ್ಕಾಗಿ ಆಧ್ಯಾತ್ಮ ವಿಷಯವಾಗಿ ಹಿಂಡಲಗಾದ ಲಕ್ಷ್ಮೀ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸುಲೋಚನಾ ಅವರು ವಿಶೇಷ ಉಪನ್ಯಾಸ ನಡೆಸಿಕೊಡುವರು. ಜುಲೈ 22ರಂದು ಕೆಎಲ್ಇ ಸಂಸ್ಥೆಯ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಅಧಿಕಾರಿ ಡಾ.ಮಂಜುನಾಥ ಗಡ್ಡಿ ಅವರು ಉಪನ್ಯಾಸ ನೀಡುವರು. ಹಿಂಡಲಗಾ ಗ್ರಾಮದ ಜನತೆಗೆ ಉಚಿತವಾಗಿ ಬೃಹತ್ ಪ್ರಮಾಣದಲ್ಲಿ ಹೋಮಿಯೋಪತಿ ಡೆಂಗ್ಯೂ ನಿವಾರಣಾ ಔಷಧ ವಿತರಣಾ ಶಿಬಿರವನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.