ಭಟ್ಕಳ : ತಾಲೂಕಿನ ಮುಟ್ಟಳ್ಳಿ ಪಂಚಾಯತ್ ವ್ಯಾಪ್ತಿಯ ಕೃಷ್ಣಮೂರ್ತಿ ಶೆಟ್ಟಿ ಎನ್ನುವವರ ಮನೆಯಂಗಳದಲ್ಲಿ 7 ಅಡಿ ಉದ್ದದ ಹೆಬ್ಬಾವು ಬಂದಿದೆ. 20 ಕೆಜಿಗೂ ಅಧಿಕ ತೂಕವಿರುವ ಹೆಬ್ಬಾವನ್ನು ಉರಗ ಪ್ರೇಮಿಗಳು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಭಟ್ಕಳದ ಕರಾವಳಿ ಭಾಗದಲ್ಲಿ ಮಳೆಯು ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿವೆ. ಮನೆಯಂಗಳದಲ್ಲಿ ನೋಡಿದ ಈ ಬೃಹದಾಕಾರದ ಹೆಬ್ಬಾವು ನೋಡಿ ಮನೆಯವರ ಮತ್ತು ಅಕ್ಕಪಕ್ಕದವರ ಆತಂಕಕ್ಕೆ ಕಾರಣವಾಗಿತ್ತು.
ಹಾವನ್ನು ರಕ್ಷಿಸುವಂತೆ ಮನೆ ಮಾಲೀಕ ಕೃಷ್ಣಮೂರ್ತಿ ಶೆಟ್ಟಿ ಅವರು ಸ್ಥಳೀಯ ಉರಗಪ್ರೇಮಿ ಒಬ್ಬರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದರು.

ಸ್ಥಳಕ್ಕೆ ಆಗಮಿಸಿದ‌ ಉರಗ ಪ್ರೇಮಿಗಳಾದ ಮುಟ್ಟಳ್ಳಿಯ ರಾಘ ನಾಯ್ಕ ಹಾಗೂ‌ ಪುರವರ್ಗದ ಮಾದೇವ ನಾಯ್ಕ ಹಾವನ್ನು ರಕ್ಷಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಮನೆಯ ಪಕ್ಕದಲ್ಲಿ ಇದ್ದ ಕಂಪೌಂಡ್ ಒಂದರಲ್ಲಿ ಅಡಗಿಕೊಂಡಿದ್ದ ಹೆಬ್ಬಾವನ್ನು ಹಿಡಿದಿದ್ದಾರೆ. ಪ್ರಯಾಸ ಪಟ್ಟು ಹಾವಿನ ಬಾಲ ಹಿಡಿದು, ನಿಧಾನವಾಗಿ ಹೆಬ್ಬಾವನ್ನು ಮೇಲೆತ್ತಿದ್ದಾರೆ. ಕಂಪೌಂಡ್ ಸಂಧಿಯಲ್ಲಿ ಹೆಬ್ಬಾವು ಮತ್ತೆ ಮತ್ತೆ ತಪ್ಪಿಸಿಕೊಕೊಳ್ಳುತ್ತಿತ್ತು. ಅದಕ್ಕೆ ಅವಕಾಶ ನೀಡದ ರಾಘ ನಾಯ್ಕ ಹಾಗೂ ಮಾದೇವ ನಾಯ್ಕ ಸುಮಾರು ಅರ್ಧ ಗಂಟೆ ಕಾಲ‌ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.