ಸುಮಾರು ೪೦೦ ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಸಹಿತ ವಿವಿಧ ಭಾಷೆಗಳ ಒಟ್ಟು ೬೦೦ ಚಿತ್ರಗಳಲ್ಲಿ ಅಭಿನಯಿಸಿದ ನಟಿ ಲೀಲಾವತಿಯವರು ಪ್ರಬುದ್ಧ ಅಭಿನಯಕ್ಕೆ ಹೆಸರಾದವರು. ೪೦-೬೦ ರ ದಶಕಗಳಲ್ಲಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಾದ ಪಂಡರಿಬಾಯಿ ಮತ್ತು ಲೀಲಾವತಿಯವರ ಕೊಡುಗೆ ಕನ್ನಡ ಬೆಳ್ಳಿತೆರೆಗೆ ಅಪಾರ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ೧೯೩೭ ರಲ್ಲಿ ಜನಿಸಿದ ಅವರ ಮೊದಲ ಹೆಸರು ಲೀಲಾ ಕಿರಣ. ಆರನೇ ವಯಸ್ಸಿಗೇ ಪಾಲಕರನ್ನು ಕಳೆದುಕೊಂಡ ಅವರು ಚಿಕ್ಕ ವಯಸ್ಸಿನಲ್ಲೇ ಸಿನಿಮಾ ನಾಟಕರಂಗಗಳಲ್ಲಿ ಅಭಿನಯಿಸತೊಡಗಿದರು. ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿದ ಅವರ ಮೊದಲ ಸಿನೆಮಾ ಮಾಂಗಲ್ಯಯೋಗ. ನಂತರ ಚಂಚಲಕುಮಾರಿ, ನಾಗಕನ್ನಿಕಾ, ಭಕ್ತಪ್ರಹ್ಲಾದ , ಧರ್ಮ ವಿಜಯ, ರಣಧೀರ ಕಂಠೀರವ ಮೊದಲಾದವು.
ರಾಣಿ ಹೊನ್ನಮ್ಮ ಚಿತ್ರದಿಂದ ಅವರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳತೊಡಗಿದರು. ಮುಂದೆ ಸಂ ತುಕಾಾರಾಮ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಭೂದಾನ, ಗಾಳಿಗೋಪುರ, ವೀರಕೇಸರಿ, ಮನ ಮೆಚ್ಚಿದ ಮಡದಿ, ಗೆಜ್ಜೆಪೂಜೆ, ಮೊದಲಾದ ಸಿನಿಮಾಗಳಲ್ಲಿನ ತಮ್ಮ ಭಾವಪೂರ್ಣ ಅಭಿನಯದಿಂದ ಕನ್ನಡ ಚಿತ್ರ ರಸಿಕರನ್ನು ಸೆಳೆದ ಲೀಲಾವತಿ ಅವರು ಹಲವು ಚಿತ್ರಗಳಲ್ಲಿ ಡಾ. ರಾಜಕುಮಾರ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದಲ್ಲದೆ ನಂತರ ಅವರ ತಾಯಿಯಾಗಿಯೂ ಕಾಣಿಸಿಕೊಂಡರು.
ಕನ್ನಡವಲ್ಲದೆ ತಮಿಳು, ತೆಲುಗು, ಮಲೆಯಾಳಿ ಮತ್ತು ತುಳು ಚಿತ್ರಗಳಲ್ಲೂ ಅಭಿನಯಿಸಿದ ಅವರು ತಮ್ಮ ಮಗ ವಿನೋದ ರಾಜನನ್ನೂ ತೆರೆಗೆ ತಂದರು ಮತ್ತು ಸ್ವತಃ ನಾಲ್ಕು ಸಿನಿಮಾಗಳನ್ನು ನಿರ್ಮಿಸಿದರು. ಕಾಲೇಜು ಹೀರೋ, ಕನ್ನಡದ ಕಂದ, ಶುಕ್ರ ಮತ್ತು ಯಾರದು ಅವರ ನಿರ್ಮಾಣದ ಚಿತ್ರಗಳು. ಗೆಜ್ಜೆಪೂಜೆ, ಡಾ. ಕೃಷ್ಣ ಚಿತ್ರಗೞ ಅಭಿನಯಕ್ಕಾಗಿ ರಾಜ್ಯ ಚಿತ್ರಪ್ರಶಸ್ತಿ ಪಡೆದರಲ್ಲದೆ ೧೯೯೯ ರಲ್ಲಿ ಅವರ ಚಿತ್ರರಂಗದ ಸೇವೆಗಾಗಿ ಅವರಿಗೆ ಡಾ. ರಾಜಕುಮಾರ ಪ್ರಶಸ್ತಿಯ ಗೌರವವೂ ದೊರಕಿತು. ತುಮಕೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿತು.
-ಎಲ್. ಎಸ್. ಶಾಸ್ತ್ರಿ