“ನರಗುಂದ ಬಂಡಾಯ”,
“ರಾಮದುರ್ಗ ದುರಂತ”ಕ್ಕೆ 44 ವರ್ಷ!
ಘಟನಾ ಸ್ಥಳದ ವರದಿ ಮಾಡಲು
ಶಿರಸಂಗಿಯಿಂದ ರಾಮದುರ್ಗಕ್ಕೆ
14 ಕಿ.ಮೀ.ನಡೆದುಕೊಂಡೇ ಹೋಗಿದ್ದೆ! 1980 ರ ಜಲೈ 21 ರಂದು ಅಂದಿನ ಧಾರವಾಡ ಜಿಲ್ಲೆಯ ನರಗುಂದ,ನವಲಗುಂದ
ಮತ್ತು ಜುಲೈ 22 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ರೈತರ ಬಂಡಾಯಕ್ಕೆ ಈಗ 40 ವರ್ಷ ಪೂರ್ಣ. ದಿ.ಗುಂಡೂರಾವ್ ಸರಕಾರ ರೈತರ ಹೊಲಗಳ ಮೇಲೆ ಹಾಕಿದ್ದ ಬೆಟರ್ ಮೆಂಟ್ ತೆರಿಗೆಯ ವಿರುದ್ಧ ಬಂಡಾಯವೆದ್ದ ರೈತರ ಚಳವಳಿಯನ್ನು ಹತ್ತಿಕ್ಕಲು ಗೋಲಿಬಾರ್ ನಡೆದಾಗ ರೈತರು ಮತ್ತು ಪೋಲೀಸರ ಸಾವು ನೋವುಗಳು ಸಂಭವಿಸಿದ್ದು ಇತಿಹಾಸದ ಕರಾಳ ಪುಟಗಳಲ್ಲಿ ಸೇರಿ ಹೋಗಿದೆ. ಜುಲೈ 21 ರಂದು ನರಗುಂದದಲ್ಲಿ ರೈತರ ಮತ್ತು ಪೋಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ ಎರಡೂ ಕಡೆ ಸಾವುಗಳು ಸಂಭವಿಸಿದವು.ಮಾರನೇ ದಿನದಂದು ಜುಲೈ 22 ರಂದು ನಾನು ರೈತರ ಸಮಸ್ಯೆಗಳ ಸಂಬಂಧದ ಮಾಹಿತಿ ಕಲೆ ಹಾಕಲು ಸವದತ್ತಿ ಬಳಿಯ ನವಿಲುತೀರ್ಥಕ್ಕೆ ಮುಂಜಾನೆ ಹೋದೆ.ಹನ್ನೊಂದು ಗಂಟೆಯಾಗಿತ್ತು.ರಾಮದುರ್ಗದಲ್ಲಿ ಗೋಳಿಬಾರ್ ನಡೆದು ಒಬ್ಬ ಸಾವನ್ನಪ್ಪಿದ ಸುದ್ದಿ ನವಿಲುತೀರ್ಥ ಆಣೆಕಟ್ಟಿನ ಕಚೇರಿ ತಲುಪಿತು!ನಾನು ಬಸ್ ಏರಿ ಸವದತ್ತಿಗೆ ಧಾವಿಸಿದೆ.2 ಗಂಟೆಗೆ ರಾಮದುರ್ಗ ಬಸ್ ಹಿಡಿದು ಹೊರಟೆ. ಶಿರಸಂಗಿಯಲ್ಲಿ ಬಸ್ ನಿಂತಿತು.ರಾಮದುರ್ಗ ಗೋಳಿಬಾರ್ ನಲ್ಲಿ ಒಬ್ವ ಸತ್ತಿದ್ದು ಗಾಯಗೊಂಡವರನ್ನು ಹುಬ್ಬಳ್ಳಿಯ ಕೆ ಎಮ್ ಸಿ ಆಸ್ಪತ್ರೆಗೆ ಒಯ್ಯಲಾಗುತ್ತಿದೆ ಎಂಬ ಸುದ್ದಿ ಹಬ್ಬಿದ್ದರಿಂದ ರಾಮದುರ್ಗಕ್ಕೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.ನಾನು ಕುಳಿತಿದ್ದ ಬಸ್ ಚಾಲಕನೂ ಮುಂದೆ ಸಾಗಲಿಲ್ಲ.ಎಲ್ಲರನ್ನೂ ಇಳಿಸಿಬಿಟ್ಟ. ನನಗಾದರೊ ರಾಮದುರ್ಗಕ್ಕೆ ವರದಿ ಮಾಡಲು ಹೋಗಲೇ ಬೇಕಾಗಿತ್ತು.ನಾಲ್ಕಾರು ಜನರಿಗೆ ಹುರುಪು ತುಂಬಿ ರಾಮದುರ್ಗಕ್ಕೆ ನಡೆದುಕೊಂಡೇ ಹೊರಟೆವು. ಮುಳ್ಳೂರು ಗುಡ್ಡವನ್ನು ಏರಿ ,ಇಳಿದು ರಾಮದುರ್ಗ ತಲುಪಿದಾಗ ಸಂಜೆ 6 ಗಂಟೆ! ಅಲ್ಲಿಯ ಬಸ್ ನಿಲ್ದಾಣದ ಬಳಿಯ ಉಗ್ರಾಣವೊಂದರ ಲೂಟಿ ನಡೆದಾಗ ಗೋಳಿಬಾರ್ ಆಗಿತ್ತು.ಒಬ್ವ ಸತ್ತಿದ್ದ.ಬೆಳಗಾವಿಯಿಂದ ಎಸ್.ಪಿ.ಶ್ರೀ ಟಿ.ಮಡಿಯಾಳ ಅದೇ ತಾನೇ ಬಂದಿಳಿದಿದ್ದರು.ನನ್ನನ್ನು ನೋಡಿದ ಅವರು” ನಾನೇ ಈಗ ಬಂದಿದ್ದೇನೆ.ನೀವು ಇಷ್ಟು ಬೇಗ ಬೆಳಗಾವಿಯಿಂದ ಹೇಗೆ ಬಂದಿರಿ? ಎಂದು ಅಚ್ಚರಿಯಿಂದ ಕೇಳಿದರು.ನಡೆದುಕೊಂಡ ಬಂದಿದ್ದನ್ನು ತಿಳಿಸಿದಾಗ ಅವರಿಗೆ ಅಚ್ಚರಿ.
ನಾನು ” ಕನ್ನಡಮ್ಮ” ದಿನಪತ್ರಿಕೆಯ ಸಂಪಾದಕ ಎಮ್.ಎಸ್.ಟೋಪಣ್ಣವರಿಗೆ ಫೋನ್ ಮಾಡಿ ವರದಿ ಮಾಡಬೇಕಾಗಿತ್ತು.ರಾಮದುರ್ಗದ ನಮ್ಮ ಮನೆಯ ಸಮೀಪದಲ್ಲಿಯೇ ಇದ್ದ ” ಪಾಂಡುರಂಗ” ಚಿತ್ರಮಂದಿರದ ಮಾಲಿಕರಾದ ಶರಬಣ್ಣ ಆರಿಯವರ ಮನೆಗೆ ಹೋದೆ.ಸ್ಥಿರ ದೂರವಾಣಿಯಿಂದ ಬೆಳಗಾವಿಯ ಕನ್ನಡಮ್ಮ ಕಾರ್ಯಾಲಯದ ದೂರವಾಣಿ( 23804) ಗೆ ಕರೆ ಬುಕ್ ಮಾಡಿದೆ.ಸಂಜೆ 7 ಕ್ಕೆ ಬುಕ್ ಮಾಡಿದರೆ 8 ಗಂಟೆಗೆ( ಅರ್ಜಂಟ್ ಕಾಲ್)ಸಂಪಾದಕರು ಸಿಕ್ಕರು! ಸಂಪಾದಕರಿಗೆ ಅಚ್ಚರಿ!” ನೀನು ಹೋಗಿದ್ದು ಮುನವಳ್ಳಿ ಡ್ಯಾಮಿಗೆ.ಈಗ ಸಂಜೆ ರಾಮದುರ್ಗದಿಂದ ಗೋಲಿಬಾರ್ ಸುದ್ದಿ ಕೊಡ್ತಾಯಿದ್ದಿ” ಎಂದರು! ಸುದ್ದಿ ಕೊಟ್ಟೆ.ರಾಮದುರ್ಗದಲ್ಲಿ ಕರ್ಫ್ಯೂ ಇತ್ತು.ಹೊರಗಿನಿಂದ ಬಸ್ ಗಳು ಬರುವಂತಿಲ್ಲ.ಹೊರಗೆ ಹೋಗುವಂತಿಲ್ಲ.ಮರುದಿನ ಊರೆಲ್ಲ ಬಿಕೋ ಎನ್ನುತ್ತಿದೆ.ಕನ್ನಡಮ್ಮ ಪತ್ರಿಕೆ ಅಲ್ಲಿಗೆ ಬರುವದಾದರೂ ಹೇಗೆ?
ಪತ್ರಿಕೆಯ ಬಂಡಲ್ ನ್ನು ಬೆಳಗಾವಿಯಿಂದ 60 ಕಿ.ಮೀ ದೂರದಲ್ಲಿರುವ,ಬಾಗಲಕೋಟೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಯರಗಟ್ಟಿಯವರೆಗೆ ತಲುಪಿಸಲು ಸಂಪಾದಕರಿಗೆ ತಿಳಿಸಿದೆ.ನಾನು ನನ್ನ ಚಿಕ್ಕಪ್ಪನ ಬುಲೆಟ್ ಬೈಕ್ ತೆಗೆದುಕೊಂಡು ಯರಗಟ್ಟಿಗೆ ಮುಂಜಾನೆಯೇ ಹೋದೆ. 500 ಪತ್ರಿಕೆಗಳ ಬಂಡಲ್ ತೆಗೆದುಕೊಂಡು,ಬೈಕ್ ಹಿಂಭಾಗದ ಸ್ಟ್ಯಾಂಡಿಗೆ ಕಟ್ಟಿಕೊಂಡು ರಾಮದುರ್ಗಕ್ಕೆ ಬಂದಾಗ ಮುಂಜಾನೆ 9 ಗಂಟೆ.ಊರಿಗೆ ಯಾವದೇ ಪತ್ರಿಕೆಯು ಬರದಾದಾಗ “ಕನ್ನಡಮ್ಮ” ದ್ದೇ ಹವಾ.ಒಂದೇ ತಾಸಿನಲ್ಲಿ ಎಲ್ಲವೂ ಮಾರಾಟ! ರಾಮದುರ್ಗದಿಂದ ದಿನಾಲೂ ಫೋನಿನಲ್ಲಿ ಸುದ್ದಿ ಕೊಡುವದು.ಮರುದಿನ ಯರಗಟ್ಟಿಯಿಂದ ಬುಲೆಟ್ ಮೇಲೆ ಪತ್ರಿಕೆ ತರುವ ಈ ಸರ್ಕಸ್ ನ್ನು ಒಂದು ವಾರ ಕಾಲ ಮಾಡಿದೆ.ಜುಲೈ 21 ರ ನರಗುಂದ ಘಟನೆಯ ಸುದ್ದಿಗೆ ” ನರಗುಂದ ಬಂಡಾಯ” ಎಂಬ ತಲೆಬರಹ ಕೊಟ್ಟಿದ್ದೆ( ಬ್ರಿಟಿಶರ ವಿರುದ್ಧ ಬಾಬಾಸಾಹೇಬ ನಡೆಸಿದ ಬಂಡಾಯದ ಹಿನ್ನೆಲೆಯಲ್ಲಿ). ಜುಲೈ 22 ರ ರಾಮದುರ್ಗ ಘಟನೆಗೆ” ರಾಮದುರ್ಗ ದುರಂತ”( 1939 ರ ಎಪ್ರೀಲ್ 5 ರಂದು ರಾಮದುರ್ಗದ ಜನರು ಮಹಾರಾಜನ ವಿರುದ್ಧ ಬಂಡಾಯವೆದ್ದು ಹಿಂಸಾಚಾರ ನಡೆದಾಗ ರಾಮದುರ್ಗ ದುರಂತ ಎಂದು ಖ್ಯಾತಿ ಪಡೆದಿತ್ತು) ಈ ಎರಡೂ ಘಟನೆಗಳು ಘಟಿಸಿ 2020 ರ ಜುಲೈ 21,22 ಕ್ಕೆ 40 ವರ್ಷ ಪೂರ್ಣಗೊಂಡಿವೆ.
( ಅಶೋಕ ಚಂದರಗಿ,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ)