ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ಗಳನ್ನು ಧಾರೆ ಎರೆಯುವ ಕಾರ್ಯಕ್ರಮ ಅಮೃತ ಸಿಂಚನ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.

ಅಮೃತ ಸಿಂಚನದ ಪ್ರಥಮ ಮಾಲಿಕೆಯಲ್ಲಿ ಕಾರ್ಕಳ ಸಾಹಿತ್ಯ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ , ಇವತ್ತು ನೀವು ಏನು ಆಗಿದ್ದೀರಿ. ಅದಕ್ಕೆ ಕಾರಣ ನೀವೇ , ಮುಂದೆ ನೀವು ಏನು ಆಗಬೇಕು. ಅದಕ್ಕೂ ಕಾರಣ ನೀವೇ. ನಿಮ್ಮ ದೈಹಿಕ ವ್ಯಕ್ತಿತ್ವ , ಬೌದ್ಧಿಕ ವ್ಯಕ್ತಿತ್ವ ಮತ್ತು ನಡಾವಳಿ ವ್ಯಕ್ತಿತ್ವಗಳನ್ನು ನಿಮ್ಮೊಳಗೆ ಪರಿಪೂರ್ಣಗೊಳಿಸಿಕೊಂಡಾಗ ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮುತ್ತೀರಿ. ತಂದೆ , ತಾಯಿ, ಗುರು, ಆತ್ಮಸಾಕ್ಷಿ ಮತ್ತು ಬೆಳಕು ಈ ಐದು ಅಂಶಗಳ ಬಗ್ಗೆ ಜಾಗೃತಿಯನ್ನು ನಿಮ್ಮೊಳಗೆ ಮೂಡಿಸಿಕೊಳ್ಳಬೇಕು ಎಂದರು.

ಹಾಸ್ಟೆಲ್ ಕಮಿಟಿಯ ಗೌರವಾಧ್ಯಕ್ಷ ಯೋಗೀಶ್ ಭಟ್ ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿ , ಇವತ್ತಿನ ಉಪನ್ಯಾಸ ಮಾಲಿಕೆಯಲ್ಲಿ ಅತಿಥಿಗಳು ಉಪ್ಪು , ಹುಳಿ, ಖಾರ, ಸಿಹಿ ಎಲ್ಲವನ್ನೂ ಒಳಗೊಂಡ ಮೃಷ್ಟಾನ್ನವನ್ನೇ ಉಣಬಡಿಸಿದರು, ವಿದ್ಯಾರ್ಥಿ ಈ ಎಲ್ಲ ಮೌಲ್ಯ ಭರಿತ ಅಂಶಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದರು.

ಕಾಂತಾವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ , ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷ ಸಿಎ . ಎಂ. ರವಿ ರಾವ್, ಸ್ಥಾಪಕಾಧ್ಯಕ್ಷ ಸತೀಶ್ ಪೈ, ಕಾಲೇಜು ಅಧ್ಯಕ್ಷ ರಾಜೇಶ್ ನಾಯಕ್ , ಹಾಸ್ಟೆಲ್ ಕಮಿಟಿ ಸದಸ್ಯ ರಾಮಕೃಷ್ಣ ಆಚಾರ್ಯ , ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ಚೀಫ್ ವಾರ್ಡನ್ ರವೀಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರತಿಭಾ ಅನಾವರಣದ ,” ಕಲೋತ್ಸವ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿಲಯ ಪಾಲಕರು , ವಸತಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ಪೂರ್ವಿ ಪಿ. ಶೆಟ್ಟಿ ಸ್ವಾಗತಿಸಿದರು. ಪ್ರತೀಕ್ಷಾ ವಂದಿಸಿದರು. ಮೈತ್ರಿ , ತ್ರಿಷಾ , ಕೀರ್ತನಾ ನಿರೂಪಿಸಿದರು.