ಬೆಂಗಳೂರು:

ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಲೀಲಾವತಿ ಅವರ ನಿಧನಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಕನ್ನಡ ಚಿತ್ರರಂಗ ಕಂಡ ಮೇರು ನಟಿಯರಲ್ಲಿ ಲೀಲಾವತಿ ಅವರೂ ಒಬ್ಬರು. ಅವರೊಬ್ಬ ಕಲಾತಪಸ್ವಿ. ತಮ್ಮ ಮನೋಜ್ಞ ಅಭಿನಯದಿಂದ “ಅಮ್ಮ” ಎಂದೇ ಖ್ಯಾತಿ ಪಡೆದಿದ್ದರು.

ಕಪ್ಪು ಬಿಳುಪು ಚಿತ್ರದಿಂದ ಆಧುನಿಕ ಚಿತ್ರರಂಗದವರೆಗೂ ಕ್ರಿಯಾಶೀಲರಾಗಿ ಕಲಾಸೇವೆ ಸಲ್ಲಿಸಿದ್ದರು. ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿರಸಿಕರ ಮನದಲ್ಲಿ ಮನೆಮಾಡಿದ್ದರು ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.

ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲೂ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದರು. ಲೀಲಾವತಿ ಅವರು ಇಳಿ ವಯಸ್ಸಿನಲ್ಲೂ ಹೋರಾಟದ ಬದುಕು ನಡೆಸಿದ್ದಾರೆ.

ಅವರ ಜೀವನ ಪ್ರೀತಿ, ಉತ್ಸಾಹ, ಪ್ರಾಣಿ ದಯೆ, ಕಲ್ಲು ಮುಳ್ಳುಗಳ ಭೂಮಿಯಲ್ಲಿ ಬೆಳೆ ತೆಗೆದ ರೀತಿ ಸೇರಿದಂತೆ ಅವರ ಪ್ರತಿ ಹೆಜ್ಜೆಯೂ ಬೇರೆಯವರಿಗೆ ಆದರ್ಶವಾಗಿದೆ.

ಇತ್ತೀಚೆಗೆ ಅನಾರೋಗ್ಯದ ನಡುವೆಯೂ ನನ್ನ ಮನೆಗೆ ಬಂದು ಅವರು ಕಟ್ಟಿರುವ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನಿಸಿದ್ದರು. ಅವರ ಇಚ್ಛೆಯಂತೆ ನಾನು ಹೋಗಿ ಆಸ್ಪತ್ರೆ ಉದ್ಘಾಟನೆ ಮಾಡಿ, ಆ ತಾಯಿಯ ಆಶಿರ್ವಾದ ಪಡೆದು ಬಂದಿದ್ದೆ.

ಲೀಲಾವತಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ನೋವಿನ ಕ್ಷಣದಲ್ಲಿ ನಾವು ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಜತೆ ನಿಲ್ಲುತ್ತೇವೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 

ಹಿರಿಯ ನಟಿ ಡಾ. ಲೀಲಾವತಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

*ಗೋಕಾಕ್*-
ಸ್ಯಾಂಡಲ್ ವುಡ್ ನ ಹಿರಿಯ ನಟಿ ಡಾ. ಲೀಲಾವತಿ ಅವರ ನಿಧನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.
ಲೀಲಾವತಿ ಅವರ ನಿಧನದಿಂದ ಚಿತ್ರೋದ್ಯಮವೂ ಸೇರಿದಂತೆ ಇಡೀ ನಾಡೇ ಬಡವಾಗಿದೆ. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಅವರು, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
ಬಹುಭಾಷೆ ನಟಿಯಾಗಿ ಗುರುತಿಸಿಕೊಂಡಿದ್ದ ಅವರು, ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ‌ಸಮಾಜಸೇವೆಯಲ್ಲಿಯೂ ಹೆಸರುವಾಸಿಯಾಗಿದ್ದರು.
ಡಾ.ಲೀಲಾವತಿಯವರ ಆತ್ಮಕ್ಕೆ ದೇವರು ಚಿರಶಾಂತಿಯನ್ನೀಡಲೆಂದು ಪ್ರಾರ್ಥಿಸಿರುವ ಅವರು, ದಿವಂಗತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ.