ಬೆಂಗಳೂರು : ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಟ್ಟುಗೂಡಿಸಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆ ಮಾಡಲು ಹಾಗೂ ಅದರಡಿ ನಗರ ಪಾಲಿಕೆಗಳನ್ನು ರಚಿಸಲು ಅವಕಾಶ ಕಲ್ಪಿಸುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕ-2024ಕ್ಕೆ’ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP), ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಆನೇಕಲ್ ಸೇರಿ) ಎರಡನ್ನೂ ಸೇರಿಸಿ ಗ್ರೇಟರ್ ಬೆಂಗಳೂರು(Greater Bangalore) ಪ್ರಾಧಿಕಾರ ರಚಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲೇ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ಸರ್ಕಾರ ತೀರ್ಮಾನಿಸಿದೆ.ಬಿಬಿಎಂಪಿಯನ್ನು 1 ರಿಂದ 10 ಪಾಲಿಕೆಗಳಾಗಿ ವಿಭಜಿಸಬಹುದೆಂದು ಬಿ.ಎಸ್. ಪಾಟೀಲ್ ಸಮಿತಿ(B.S. Patil Committee) ಶಿಫಾರಸಿಗೆ ಸಂಪುಟ ಒಪ್ಪಿದೆ. 400 ವಾರ್ಡ್ಗಳೂ ವಿಕೇಂದ್ರೀಕೃತ ಅಧಿಕಾರ ಹೊಂದಿರಲಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(Greater Bangalore Authority)ಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಲಿದ್ದು, ಬೆಂಗಳೂರು ನಗರ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಅದರ ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ. ಉಳಿದಂತೆ ಗೃಹ ಸಚಿವ, ನಗರಾಭಿವೃದ್ಧಿ ಸಚಿವ, ಸಾರಿಗೆ ಸಚಿವ, ಇಂಧನ ಸಚಿವ, ಬೃಹತ್ ಬೆಂಗಳೂರು ವ್ಯಾಪ್ತಿಯ ಶಾಸಕರು ಹಾಗೂ ಸಚಿವರು ಅದರ ಸದಸ್ಯರಾಗಿರಲಿದ್ದಾರೆ.ಅದೇ ರೀತಿ ಮಹಾನಗರ ಪಾಲಿಕೆಗಳ ಮೇಯರ್ಗಳು, ಪ್ರತಿ ಮಹಾನಗರ ಪಾಲಿಕೆಯಿಂದ ನಾಮನಿರ್ದೇಶನಗೊಂಡ ಇಬ್ಬರು, ಬಿಡಿಎ ಆಯುಕ್ತ, ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ಎಂಡಿ, ಬಿಎಂಆರ್ಸಿಎಲ್ ಎಂಡಿ, ಬೆಸ್ಕಾಂ ಎಂಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಸಿಇಒ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯ ಎಂಡಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ನಗರ ಯೋಜನಾಧಿಕಾರಿ, ಪ್ರಧಾನ ಮುಖ್ಯ ಎಂಜಿನಿಯರ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಸದಸ್ಯರಾಗಿರಲಿದ್ದಾರೆ.