ಬೆಂಗಳೂರು : ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಲೆಜಿಸ್ತೇಜರ್ ಕಪ್-2024 ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ಬಿಜೆಪಿ ಶಾಸಕರು ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ಈ ಮೂಲಕ ತಾವೊಬ್ಬ ಪ್ರತಿಭೆ ಹೊಂದಿದ ಶಾಸಕ ಎನ್ನುವುದನ್ನು ನಿರೂಪಿಸಿದ್ದಾರೆ. ಅಪಾರ ಜನಪರ ಕಾಳಜಿ ಹೊಂದಿರುವ ಶಾಸಕ ಎಂದು ಪರಿಗಣಿಸಲ್ಪಟ್ಟಿರುವ ವಿಠ್ಠಲ ಹಲಗೇಕರ ಅವರು ಖಾನಾಪುರ ಜನತೆಯ ಪ್ರೀತಿಪಾತ್ರ ಶಾಸಕರು ಎಂದು ಜನಪ್ರಿಯರಾಗಿದ್ದಾರೆ. ಅವರು ಬೆಂಗಳೂರಿನಲ್ಲಿ ಶಾಸಕರಿಗೆ ಏರ್ಪಡಿಸಿದ್ದ ವಿಶೇಷ ಪಂದ್ಯಾವಳಿಯಲ್ಲಿ ವಿಜೇತರಾಗುವ ಮೂಲಕ ತಮ್ಮ ಕ್ಷೇತ್ರದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇದೀಗ ಸ್ಪೂರ್ತಿಯ ಸೆಲೆಯಾಗಿ ಹೊರಹೊಮ್ಮಿದ್ದಾರೆ.
ಖಾನಾಪುರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂದು ಸದಾ ಸುದ್ದಿಯಾಗುತ್ತದೆ. ಆದರೆ ಇದೀಗ ಶಾಸಕರು ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಮೂಲಕ ಖಾನಾಪುರ ಮತಕ್ಷೇತ್ರಕ್ಕೆ ಹೆಸರು ತಂದು ಕೊಟ್ಟಿದ್ದಾರೆ. ಕ್ಷೇತ್ರದ ಕೆಲಸಗಳಿಗೂ ಸದಾ ಮುಂಚೂಣಿಯಲ್ಲಿ ದುಡಿಯುವ ಶಾಸಕರು ಬರುವ ದಿನಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಲಿ ಎನ್ನುವುದು ಕ್ಷೇತ್ರದ ಜನತೆಯ ಆಶಯವಾಗಿದೆ.
ಟೂರ್ನಿಯಲ್ಲಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಚಾಂಪಿಯನ್ ಆಗಿದ್ದಾರೆ. ಖಾನಾಪುರ ಶಾಸಕ ವಿಠಲ್ ಸೋಮಣ್ಣ ಹಲಗೇಕರ್ ರನ್ನರ್ ಅಪ್ ಅಗಿದ್ದಾರೆ. ಮಂಗಳೂರು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚಾಂಪಿಯನ್, ರನರ್ ಅಪ್ ಹಾಗೂ ತೃತೀಯ ಸ್ಥಾನ ಪಡೆದುಕೊಂಡವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು.
ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಅವರು ಈ ಚೊಚ್ಚಲ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಟ್ರೋಫಿ ನೀಡಿದರು. ಚಾಂಪಿಯನ್ ಆದ ಅಜಯ್ ಸಿಂಗ್ ಅವರಿಗೆ 2 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ.
ಫೈನಲ್ ಪಂದ್ಯದಲ್ಲಿ ಅಜಯ್ ಸಿಂಗ್ ವಿರುದ್ಧ ಪರಾಭವಗೊಂಡು ರನ್ನರ್ ಅಪ್ ಆಗಿರುವ ಖಾನಾಪುರ ಶಾಸಕ ವಿಠಲ್ ಸೋಮಣ್ಣ ಹಲಗೇಕರ್ ಅವರು ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟಿದ್ದು, ಅವರಿಗೆ ಸಿಎಂ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಬಿಜೆಪಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಈ ಲೆಜಿಸ್ಟೇಚರ್ ಕಪ್-2024 ಚೆಸ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಅವರಿಗೂ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿದರು.