ಪುತ್ತೂರು: 9/11 ಖಾತಾವನ್ನು ಸ್ಥಳೀಯ ಆಡಳಿತದಲ್ಲೇ ನೀಡಬೇಕು ಅಥವಾ ಈ ಹಿಂದೆ ಇದ್ದ ಮಾದರಿಯಲ್ಲೇ ಗ್ರಾಪಂ ಕಚೇರಿಯಲ್ಲಿ ನೀಡವೇಕು ಎಂದು ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸುವ ಮೂಲಕ ಜನರ ಸಂಕಷ್ಟವನ್ನು ಸರಕಾರದ ಮುಂದಿಡುವ ಮೂಲಕ ಕಳೆದ ಕೆಲವು ತಿಂಗಳಿಂದ ಇದ್ದ 9/11 ಸಮಸ್ಯೆಗೆ ಸರಕಾರ ಮುಕ್ತಿ‌ ನೀಡಿದ್ದು ಇನ್ನು‌ಮುಂದೆ ಸ್ಥಳೀಯ ಆಡಳಿತದ‌ ಮೂಲಕ 9/11 ನೀಡುವ ಬಗ್ಗೆ ರಾಜ್ಯ ಸರಕಾರ ತೀರ್ಮಾನವನ್ನು ಕೈಗೊಂಡಿದ್ದು ಈ ಮೂಲಕ ಶಾಸಕ ಅಶೋಕ್ ರೈ ಹೋರಾಟಕ್ಕೆ ಜಯ ದೊರೆತಂತಾಗಿದೆ.

ಮನೆ ಕಟ್ಟುವಲ್ಲಿ‌ 9/11 ಕಡ್ಡಾಯವಾಗಿ ಮಾಡಬೇಕು ಎಂಬ ಕಾನೂನು ಇದೆ. ಈ ಹಿಂದೆ ಗ್ರಾಪಂ ಕಚೇರಿಯಲ್ಲೇ ಇದು ಸಿಗುತ್ತಿತ್ತು. ಬೊಮ್ಮಾಯಿ ಸರಕಾರದ ಕೊನೇ ಅವಧಿಯಲ್ಲಿ ಈ ನಿಯಮ ಬದಲಾವಣೆಯಾಗಿತ್ತು. ಗ್ರಾಪಂ ಕಚೇರಿಯಲ್ಲಿ ನೀಡುತ್ತಿದ್ದ 9/11 ನ್ನು ಮಂಗಳೂರು‌ ನಗರ ಪಾಲಿಕಾ ಮೂಡಾದಲ್ಲಿ ನೀಡಲಾಗುತ್ತಿತ್ತು. ಗ್ರಾಮಾಂತರ ಪ್ರದೇಶದ ಜನರು ಮನೆ ಕಟ್ಟಬೇಕಾದರೆ 9/11 ಗಾಗಿ ಮಂಗಳೂರಿಗೆ ಅಲೆದಾಡಬೇಕಿತ್ತು. ಇದು ಗ್ರಾಮೀಣ ಜನರಿಗೆ ಬಹಳ ಸಂಕಷ್ಟವನ್ನು ತಂದಿತ್ತು.

ಅಧಿವೇಶನದಲ್ಲಿ ಗಮನಸೆಳೆದ ಅಶೋಕ್ ರೈ
9/11 ಸಂಕಷ್ಟದ ಬಗ್ಗೆ ಶಾಸಕ ಅಶೋಕ್ ರೈ ಅವರು ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದಿದ್ದರು. ಹೊಸ ನಿಯಮದಿಂದ ಮನೆ ಕಟ್ಟುವವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ,ಯಾವುದೇ ಕಾರಣಕ್ಕೂ ಹೀಗಿರುವ ವ್ಯವಸ್ಥೆಯನ್ನು‌ಮುಂದುವರೆಸಬಾರದು ಎಂದು ಮನವಿ ಮಾಡಿದ್ದರು. ಶಾಸಕ ಅಶೋಕ್ ರೈ ಕಾಳಜಿಗೆ ದನಿಗೂಡಿಸಿದ್ದ ಸ್ಪೀಕರ್ ಯು ಟಿ ಖಾದರ್ ರವರು ಈ ಬಗ್ಗೆ ಕಂದಾಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಿದ್ದರು. ಅದರಂತೆ ಇಂದು ನಡೆದ ಸಭೆಯಲ್ಲಿ ಸ್ಥಳೀಯ ಆಡಳಿತಕ್ಕೆ 9/11 ನೀಡಲು ಅವಕಾಶ ನೀಡಲಾಗಿದೆ.

9/11 ಸಮಸ್ಯೆ ದೊಡ್ಡ ಸಮಸ್ಯೆಯಾಗಿಯೇ ಉಳಿದಿತ್ತು. ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದಿದ್ದೆ. ಇಂದು‌ ಸರಕಾರ ಹೊಸ ಆದೇಶವನ್ನು ಜಾರಿ‌ಮಾಡಿದೆ. ಇನ್ನು ಜನರು 9/11 ಗಾಗಿ‌ಮೂಡಾಕ್ಕೆ ಹೋಗಬೇಕಾದ ಅವಶ್ಯಕತೆ ಇಲ್ಲ. ನನ್ನ ಕ್ಷೇತ್ರದ ಜನರಿಗೆ ಪುತ್ತೂರಿನ‌ ಪುಡಾ ಕಚೇರಿಯಲ್ಲೇ ಇದು ದೊರೆಯಲಿದೆ-ಅಶೋಕ್ ರೈ, ಶಾಸಕರು ಪುತ್ತೂರು