ಬೆಂಗಳೂರು : ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್. ಕೆ.ಪಾಟೀಲ ಅವರು,
ಕೆ.ಆರ್ಎಸ್ ಜಲಾಶಯದ ಬೃಂದಾವನವನ್ನು ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 2263 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಹೆಲಿಪ್ಯಾಡ್, ಪಾರ್ಕಿಂಗ್, ಜಲಕ್ರೀಡೆ ಸೇರಿದಂತೆ ಎಲ್ಲವನ್ನೂ ಇದು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಪ್ರೌಢಶಾಲೆಯ ಶಿಕ್ಷಕರು ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ಹೊಂದಲು ನಿಗದಿ ಮಾಡಿದ್ದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ.55 ರಷ್ಟು ಅಂಕಗಳನ್ನು ನಿಗದಿಪಡಿಸಿರುವುದನ್ನು ಪರಿಷ್ಕರಿಸಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ನಿಗದಿಪಡಿಸಲು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕೇಂದ್ರೀಕೃತ ದಾಖಲಾತಿ ಘಟಕ ಅಥವಾ ಕರ್ನಾಟಕ ಲೋಕಸೇವಾ ಆಯೋಗಗಳನ್ನು ಉಪನ್ಯಾಸಕರ ವೃಂದದ ಆಯ್ಕೆ ಪ್ರಾಧಿಕಾರವೆಂದು ನಿಗದಿಪಡಿಸಲು ಮತ್ತು ಉಪನ್ಯಾಸಕ ವೃಂದದ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ನಿಗದಿಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಸ್ತಾವನೆಯನ್ನು ಸಚಿವ ಸಂಪುಟವು ಒಪ್ಪಿದೆ ಎಂದು ಸಚಿವರು ತಿಳಿಸಿದರು.
2017-18 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಒಂದು ಬಾರಿಗೆ ಮಾತ್ರ ಎರಡು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿದ್ದು, ಅದಕ್ಕೆ ಘಟನೋತ್ತರ ಅನುಮೋದನೆ ನೀಡಲಾಯಿತು ಎಂದು ಮಾಹಿತಿ ನೀಡಿದರು.
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಬಾರಿಗೆ ವಯೋಮಿತಿ ನಿರ್ಬಂಧವನ್ನು ಸಡಿಲಿಸಿ ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಪ್ರಸ್ತಾಪಿಸಿತ್ತು. ಪ್ರಸ್ತಾಪಕ್ಕೆ ದಿನಾಂಕ: 21-06-2024ರ ಸರ್ಕಾರಿ ಆದೇಶಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳು ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.ಲೋಕೋಪಯೋಗಿ ಇಲಾಖೆ ವತಿಯಿಂದ ಕಲ್ಯಾಣ ಇಲಾಖೆಯ 15 ಹಾಸ್ಟೆಲ್ಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ವಿಜ್ಞಾನ, ತಂತ್ರಜ್ಞಾನ, ಐಟಿ, ಬಿಟಿ ಇಲಾಖೆಯ ಅನಿಮೇಷನ್ ವಿಸ್ಯುಯಲ್ ಎಫೆಕ್ಟ್ ಗೆ 16 ಕೋಟಿ ಅನುದಾನ ನೀಡಲು ಸಮ್ಮತಿಸಲಾಯಿತು ಎಂದು ತಿಳಿಸಿದರು.