ಬೆಂಗಳೂರು :
ಹಣವನ್ನು ಪೆಟ್ಟಿಗೆಯಲ್ಲಿ ಕೂಡಿಟ್ಟರೆ ಐಟಿ ದಾಳಿ ಸೇರಿದಂತೆ ನಾನಾ ತೊಂದರೆಗಳು ಬರುತ್ತವೆ. ಅದೇ ರೀತಿ ರಕ್ತವನ್ನು ದೇಹದಲ್ಲಿ ಕೂಡಿಟ್ಟರೂ ತೊಂದರೆ. ಹೀಗಾಗಿ ಎರಡನ್ನೂ ಆಗಾಗ್ಗೆ ದಾನ ಮಾಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಿವಿಮಾತು ಹೇಳಿದರು.
ನಗರದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಏರ್ಪಡಿಸಿದದ್ದ 15 ನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
ಹಣಕೊಟ್ಟು ಜೀವಪಡೆಯಲು ಆಗುವುದಿಲ್ಲ. ಆದ ಕಾರಣ ಜೀವ ಉಳಿಸುವ ರಕ್ತವನ್ನು ಸ್ವಯಂಪ್ರೇರಿತರಾಗಿ ದಾನ ಮಾಡಬೇಕು. ದೇಹದಲ್ಲಿ ರಕ್ತ ಕೂಡಿಟ್ಟುಕೊಂಡರೆ ಮಧುಮೇಹ, ಹೃದಯಾಘಾತ ಸೇರಿದಂತೆ ಅನೇಕ ರೋಗಗಳು ಬರುತ್ತವೆ. ರಕ್ತ ಹಾಗೂ ಹಣ ಇಲ್ಲದಿದ್ದರೆ ಜೀವನವಿಲ್ಲ ಎಂಬ ಸತ್ಯಸಾಯಿ ಬಾಬಾ ಅವರ ಮಾತು ನನಗೆ ಚೆನ್ನಾಗಿ ನೆನಪಿದೆ. 38 ವರ್ಷಗಳ ಹಿಂದೆ ಬಾಲ ಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟುಹಬ್ಬದಂದು, “ರಕ್ತ ಸಂಚಾರ ಸರಿಯಾಗಿದ್ದರೆ ಆರೋಗ್ಯ. ದೇಹದ ಒಂದೇ ಭಾಗದಲ್ಲಿ ರಕ್ತ ಶೇಖರಣೆಯಾದರೆ ಖಾಯಿಲೆ ಎಂದು ಅವರು ಹೇಳಿದ್ದರು.
ಬಡ ರೋಗಗಳಿಗೆ, ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವ ಮೂಲಕ ಅವರ ಆರೋಗ್ಯಕ್ಕೆ ನೆರವಾಗಬೇಕು, ರಕ್ತ ಮತ್ತು ಹಣ ಎರಡೂ ಸಮಾಜದಲ್ಲಿ ಸಮಪ್ರಮಾಣದಲ್ಲಿ ಬಳಕೆಯಾಗಬೇಕು. ಆಗ ಮಾತ್ರ ನಮ್ಮ ಸಮಾಜ ಆರೋಗ್ಯವಾಗಿರುತ್ತದೆ. ಬ್ಯಾಂಕಿನವರು ಸಹ ಹಣವನ್ನು ಕೂಡಿಟ್ಟುಕೊಳ್ಳದೆ, ಜನರ ನಡುವೆ ಹಂಚಬೇಕು. ಹಣದ ಹರಿವು ಹೆಚ್ಚಾದಷ್ಟು ಲಾಭ, ಇಲ್ಲದಿದ್ದರೆ ತೊಂದರೆಗಳು ಬರುತ್ತವೆ.
ಕೋವಿಡ್ ಸಂದರ್ಭದಲ್ಲಿ ಸುಮಾರು 5,000 ಕ್ಕೂ ಹೆಚ್ಚು ಯುವ ಸಮೂಹ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ್ದರು. ನನ್ನ ಮನೆಯಲ್ಲಿ ಇರುವ ಒಂದು ಪೋಟೊ ಗಮನಿಸಬಹುದು 40 ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಗಳಾಗಿದ್ದ ವೇಳೆ ಅವರ ಹುಟ್ಟುಹಬ್ಬದ ಅಂಗವಾಗಿ ನಾನು ರಕ್ತದಾನ ಶಿಬಿರ ಆಯೋಜನೆ ಮಾಡಿದ್ದನ್ನು ನೆನಪಿಗೆ ಇರುವ ಫೋಟೋ ಇದೆ.
ಕಳೆದ ವರ್ಷ ನನ್ನ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಣೆ ಮಾಡದೆ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಆಚರಣೆ ಮಾಡಲಾಯಿತು. ಒಟ್ಟು 4,000 ಯುನಿಟ್ ರಕ್ತ ಸಂಗ್ರಹವಾಗಿತ್ತು.
ಮಾನವನ ಜೀವ ಅತ್ಯಮೂಲ್ಯ, ರಕ್ತದಾನ ಮಾಡುವ ಮೂಲಕ ನಮ್ಮ ದೇಹದ ಆರೋಗ್ಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ನನಗೆ ಅರಿವಿದೆ. ನಾವು ಹಣ ಕೊಡಬಹುದು ಆದರೆ ಜೀವ ಕೊಡಲು ಸಾಧ್ಯವಿಲ್ಲ. ರಕ್ತದಾನ ಶಿಬಿರಗಳು ಈ ಕಾಲದ ತುರ್ತು ಕೆಲಸಗಳು.
ಸಂಜಯ್ ಗಾಂಧಿ ಅವರು ಯುವ ನಾಯಕರಾಗಿ ಹೊರ ಹೊಮ್ಮಿದ ವೇಳೆ ಈ ಬಗ್ಗೆ ಜಾಗೃತಿ ಮೂಡಿಸಿದ್ದರು, ಈಗಲೂ ಅನೇಕರು ಇದನ್ನು ಮುಂದುವರೆಸುತ್ತಿದ್ದಾರೆ ಎಂದರು.
*ಸಿಎಸ್ಆರ್ ಅನುದಾನದ ಅಡಿ 2 ಸಾವಿರ ಗ್ರಾಮೀಣ ಶಾಲೆಗಳ ಅಭಿವೃದ್ದಿ*
2 ಸಾವಿರ ಗ್ರಾಮೀಣ ಶಾಲೆಗಳನ್ನ ಸಿಎಸ್ಆರ್ ಅನುದಾನದ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಈ ಬಗ್ಗೆ ಚಿಂತನೆ ಮಾಡಲಾಗಿದ್ದು, ಖಾಸಗಿ ಕಂಪೆನಿಗಳ ಆಡಳಿತ ಮಂಡಳಿಗಳ ಜೊತೆ ಮಾತುಕತೆ ಸಡೆಸಲಾಗಿದೆ.
ಕರ್ನಾಟಕದ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಈಗಾಗಲೆ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜೊತೆ ಮಾತುಕತೆ ನಡೆಸಿ ಗ್ರಾಮೀಣ ಭಾಗದ ಒಂದೊಂದು ಶಾಲೆಗಳ ನಿರ್ವಹಣೆ ಮಾಡುವುದರ ಬಗ್ಗೆ ಚರ್ಚೆ ಮಾಡಲಾಗಿದೆ.
ಸರ್ಕಾರದಿಂದ ಒಂದು ಸಮಿತಿ ರಚನೆ ಮಾಡಿ ಕಾರ್ಪೊರೇಟ್ ವಲಯದಿಂದ 2 ಸಾವಿರ ಶಾಲೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಕಂಪೆನಿಗಳು ಅವರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಶಾಲೆಗಳ ಉಸ್ತುವಾರಿ ನೋಡಿಕೊಳ್ಳಬಹುದು. ಸರ್ಕಾರ ಸಮಾಜಮುಖಿ ಕೆಲಸಗಳಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ನೀವು ಆಯ್ಕೆ ಮಾಡಿಕೊಂಡ ಶಾಲೆಗಳ ಮುಂದೆ ಎಚ್ಡಿಎಫ್ಸಿ ಬ್ಯಾಂಕ್ ಅಭಿವೃದ್ದಿ ಪಡಿಸಿದ ಶಾಲೆ ಎಂದು ಹೆಸರಿಸಿಕೊಳ್ಳಬಹುದು. ಈ ಕಾರ್ಯಕ್ರಮವನ್ನು ತೆಲಂಗಾಣದ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಿಎಸ್ಆರ್ ಅನುದಾನ ಬಳಸಿ ಎಂದು ಕರೆ ನೀಡಿದಾಗ ಎಚ್ಡಿಎಫ್ಸಿ ಬ್ಯಾಂಕ್ ಮುಂದೆ ಬಂತು. ಇದು ಕರ್ನಾಟಕದ ಮತ್ತು ಕಾಂಗ್ರೆಸ್ ಸರ್ಕಾರದ ಅತ್ಯಮೂಲ್ಯವಾದ ಯೋಜನೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಬೇಕು. ನಗರ ಪ್ರದೇಶದ ಮೇಲಿನ ಒತ್ತಡ ಕಡಿಮೆ ಮಾಡಬೇಕು. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು.
ಈ ಮೊದಲು ನಾನು ವಿಜಯ ಬ್ಯಾಂಕ್ ಅನ್ನು ಅವಲಂಭಿಸಿದ್ದೆ. ಶಾಸಕನಾದ ನಂತರ ಸಂಬಳಕ್ಕಾಗಿ ಅಪೆಕ್ಸ್ ಬಾಂಕ್ ನಲ್ಲಿ ನನ್ನ ಖಾತೆ ತೆರೆದಿದ್ದು ಬಿಟ್ಟರೆ ಮತ್ಯಾವ ಬ್ಯಾಂಕಿನಲ್ಲೂ ನನ್ನ ಖಾತೆ ಇರಲಿಲ್ಲ. ವಿಜಯ ಬ್ಯಾಂಕ್ ಈಗ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದೆ. ಪ್ರಸ್ತುತ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿಯೂ ಖಾತೆ ತೆರೆದಿದ್ದೇನೆ, ಎಚ್ಡಿಎಫ್ಸಿ ಬ್ಯಾಂಕ್ ಅಧ್ಯಕ್ಷರು ನನಗೆ 25 ವರ್ಷಗಳಿಂದ ಆತ್ಮೀಯರು. ಈ ಬ್ಯಾಂಕ್ ಜಗತ್ತಿನ 4ನೇ ಅತಿ ದೊಡ್ಡ ಬ್ಯಾಂಕ್. ನೀವು ಗ್ರಾಮೀಟ ಪ್ರದೇಶಗಳಿಗೆ ಮುಖ ಮಾಡುತ್ತಿರುವುದು ಸಂತಸದ ವಿಚಾರ.
ಇಲ್ಲಿನ ಕೆಲವು ಸಿಬ್ಬಂದಿಗಳು ನನ್ನ ಮನೆಗೆ ಭೇಟಿ ನೀಡಿ, ಅವರ ಈ ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿಸಿದ್ದರು. ಅವರ ಈ ದಾಖಲೆಯುತ ಕೆಲಸ ನನಗೆ ಸಂತೋಷ ತಂದಿದೆ. ಬ್ಯಾಂಕಿನ ಈ ಸಾಧನೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.