ಮಂಗಳೂರು: ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮಾಂತರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರು ತಮಗೆ ಎದುರಾಗಿರುವ ಸಂಕಷ್ಟ ಪರಿಹರಿಸುವಂತೆ ಹಾಗೂ ಇಷ್ಟಾರ್ಥಸಿದ್ದಿಗೆ ಕೊರಗಜ್ಜನ ದೈವಕ್ಕೆ ಶನಿವಾರ ಹರಕೆ ಕೋಲ ನೆರವೇರಿಸಿದರು.

ಕೊರಗಜ್ಜನಿಗೆ ಕೋಲ ಸೇವೆ ನೀಡಿ ದೈವದ ಬಳಿ ಶಾಸಕ ವಿನಯ್ ಕುಲಕರ್ಣಿ ಅವರು ತಮಗೆ ಎದುರಾಗಿರುವ ಸಂಕಷ್ಟಗಳನ್ನು ಹೇಳಿಕೊಂಡರು. 48 ದಿನಗಳ ಒಳಗೆ ಶಾಸಕರಿಗೆ ಧಾರವಾಡ ಕ್ಷೇತ್ರ ನಿರ್ಬಂಧ ಸಮಸ್ಯೆ ಬಗೆಹರಿಸುವ ಬಗ್ಗೆ ಇರುವ ನ್ಯಾಯಾಲಯದ ವಿಚಾರದಲ್ಲಿ ದೈವ ಅಭಯ ನೀಡಿತು. ಮುಂದಿನ ತಿಂಗಳು ಕ್ಷೇತ್ರ ಪ್ರವೇಶಿಸಲು ಇರುವ ನಿರ್ಬಂಧದ ತೀರ್ಪಿನ ಬಗ್ಗೆ ಅವರು ವಿವರಿಸಿದರು. ಮಗನಿಗೆ ಅಪಘಾತ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗಿರುವ ಬಗ್ಗೆ ಹೇಳಿದರು.

ಕೊರಗಜ್ಜ ದೈವ ಈ ಸಂದರ್ಭದಲ್ಲಿ ಅಭಯ ನೀಡಿ, ತಪ್ಪು ಮಾಡುವುದು ಸಹಜ. ಆದರೆ,ಅದನ್ನು ತಿದ್ದಿಕೊಂಡು ಮುಂದುವರಿಯುವುದು ಸೇವೆಯ ಉತ್ತಮ ಗುಣ. ಇನ್ನು ಮೂರು ವರ್ಷಗಳ ಕಾಲ ಬಹಳ ಸೂಕ್ಷ್ಮವಾಗಿ ಇರುವಂತೆ ಸೂಚನೆ ನೀಡಿತು. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಮುಂದೆಯೂ ಸಂತೋಷದಿಂದ ಬಂದು ಕೋಲ ಸೇವೆ ನೀಡುವಂತೆ ದೈವ ನುಡಿದಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ವಿನಯ ಕುಲಕರ್ಣಿ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕರು ಹಾಗೂ ಮಂಗಳೂರಿನ ನನ್ನ ಸ್ನೇಹಿತರು ಕೋಲ ಸೇವೆ ನೀಡಿ ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಬಂದು ಕೋಲ ಸೇವೆ ನೀಡಿರುವೆ ಎಂದು ತಿಳಿಸಿದರು.