ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ದೆಹಲಿಗೆ ತೆರಳಲಿದ್ದು ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ನಂತರ ಸಂಪುಟ ಸಚಿವರ ಬದಲಾವಣೆ ಅಥವಾ ಕೆಲ ಸಚಿವರ ಖಾತೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಖಾತೆ ಮುಖ್ಯಮಂತ್ರಿ ಬಳಿ ಇದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಬೇರೆಯವರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆ ಫಲಿತಾಂಶ ಗಮನದಲ್ಲಿಟ್ಟುಕೊಂಡು ಖಾತೆ ಬದಲಾವಣೆಗೆ ಕಾಂಗ್ರೆಸ್ ಗಂಭೀರವಾಗಿ ಚಿಂತನೆ ನಡೆಸಿದೆ. ಪರಿಣಾಮಕಾರಿಯಾಗಿ ಖಾತೆ ನಿಭಾಯಿಸದವರಿಗೆ ಬದಲಾವಣೆ ಮೂಲಕ ಚುರುಕು ಮುಟ್ಟಿಸಲು ಪಕ್ಷ ತೀರ್ಮಾನಿಸಿದೆ. ಕೆಲವರ ಖಾತೆ ಅದಲು ಬದಲಾಗುವ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ-ರಾಜ್ಯಕ್ಕೆ ಏನೂ ಕೊಡದೆ ಅನ್ಯಾಯವಾಗಿಲ್ಲ ಎಂದರೆ ಹೇಗೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಮೈಸೂರು: ರಾಜ್ಯಕ್ಕೆ ಏನೂ ಕೊಡದೆ ಅನ್ಯಾಯವಾಗಿಲ್ಲ ಎಂದರೆ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು*
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಇಂದು ಮಾತನಾಡಿದರು.
*ಘೋಷಣೆ ಮಾಡಿದ್ದ ಅನುದಾನ ಕೊಟ್ಟಿಲ್ಲ*
ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿ ಕರೆದು ರಾಜ್ಯಕ್ಕೆ ಅನ್ಯಾಯವಾಗಿಲ್ಲ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಜೆಟ್ ಮೀಟಿಂಗ್ ಕರೆದಾಗ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿಗಳನ್ನೂ ನೀಡುವುದಾಗಿ ಘೋಷಣೆ ಮಾಡಿದ್ದು, ಅದನ್ನು ಕೊಡಿ ಎಂದು ಕೋರಿದ್ದೆವು. ಈ ಬಾರಿಯ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವಿಲ್ಲ. 15 ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ 5495 ಕೋಟಿಗಳ ವಿಶೇಷ ಅನುದಾನವನ್ನೂ ಕೊಟ್ಟಿಲ್ಲ. ಪೇರಿಫೇರಲ್ ರಿಂಗ್ ರೋಡ್ ಗೆ 3000ಕೋಟಿ ಕೊಡುವುದಾಗಿ ಹೇಳಿದ್ದರು.ಅದೂ ಇಲ್ಲ. 3000 ಕೋಟಿ ಕೆರೆಗಳ ಅಭಿವೃದ್ಧಿಗೆ ಕೊಡುವುದಾಗಿ ಹೇಳಿದ್ದರು. ಅದೂ ಕೂಡ ಬಜೆಟ್ ನಲ್ಲಿ ಇಲ್ಲ. ಇದು ಅನ್ಯಾಯವಲ್ಲವೇ..?ಆಂಧ್ರ, ಬಿಹಾರ ರಾಜ್ಯಗಳಿಗೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
*ನಿರ್ಮಲಾ ಸೀತಾರಾಮನ್ ಹಿಂದೆಯೂ ಸುಳ್ಳು ಹೇಳಿದ್ದರು ಈಗಲೂ ಸುಳ್ಳು ಹೇಳಿದ್ದಾರೆ*
ಹೆಚ್.ಡಿ.ಕುಮಾರಸ್ವಾಮಿ
ಮತ್ತು ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ ಅನುದಾನವನ್ನು ನಾವು ಕೂಡಿಸುತ್ತೇವೆ ಎಂದು ಪ್ರಸ್ತಾಪ ಮಾಡಬಹುದಿತ್ತು. ಕೇಂದ್ರ ಸಚಿವರ ಕ್ಷೇತ್ರ ರಾಮನಗರಕ್ಕೂ ಏನಾದರೂ ಹೊಸದು ಯೋಜನೆ ಬಂದಿದೆಯೇ? ಕೈಗಾರಿಕಾ ಕಾರಿಡಾರ್ ಬಂದಿದೆಯೇ? ಮೇಕೆದಾಟು, ಕೈಗಾರಿಕೆ ಹಾಗೂ ಕೇಳಿದ ಅನುದಾನ ಕೊಟ್ಟಿಲ್ಲ. ರಾಯಚೂರಿಗೆ ಏಮ್ಸ್ ಸ್ಥಾಪಿಸುವಂತೆ ಕೋರಿದ್ದೆವು. ಆದರೆ ಯಾವುದೇ ಪ್ರಸ್ತಾಪವಾಗಿಲ್ಲ. ಮೈಸೂರು ಅಥವಾ ಹಾಸನಕ್ಕೆ ಐ ಐ ಟಿ ಮಂಜೂರು ಮಾಡಲು ಮನವಿ ಮಾಡಿದ್ದೆವು ಅದೂ ಕೂಡ ಆಗಿಲ್ಲ ಹಾಗಾದರೆ ಅನ್ಯಾಯವಾಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ನಿರ್ಮಲಾ ಸೀತಾರಾಮನ್ ಹಿಂದೆಯೂ ಸುಳ್ಳು ಹೇಳಿದ್ದರು ಈಗಲೂ ಸುಳ್ಳು ಹೇಳಿದ್ದಾರೆ ಎಂದರು.
*ಕೇಂದ್ರದ ನೀತಿ , ಕಾರ್ಯಕ್ರಮಗಳಿಂದ ಶೇ 31% ದೇಶಕ್ಕೆ ಬರುತ್ತಿರುವ ಎಫ್.ಡಿ.ಐ ಕಡಿಮೆಯಾಗಿದೆ*
15 ನೇ ಹಣಕಾಸು ಯೋಜನೆಯಲ್ಲಿ ಅತಿ ಹೆಚ್ಚು ಅನ್ಯಾಯವಾಗಿರುವ ರಾಜ್ಯ ಕರ್ನಾಟಕ. ರಾಜ್ಯದಿಂದ ರಾಜ್ಯ ಸಭಾ ಸದಸ್ಯರಾಗಿರುವ ಅವರು ಕೈಗಾರಿಕೆಗಳೆಲ್ಲಾ ಬೇರೆ ರಾಜ್ಯಕ್ಕೆ ಹೋಗುತ್ತಿವೆ ಎಂದೂ ಹೇಳಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರದ ಹಣಕಾಸು ಸಚಿವರ
ನೀತಿ , ಕಾರ್ಯಕ್ರಮಗಳಿಂದ ಶೇ 31% ನಮ್ಮ ದೇಶಕ್ಕೆ ಬರುತ್ತಿರುವ ಎಫ್.ಡಿ.ಐ ಕಡಿಮೆಯಾಗಿದೆ. ಕೇಂದ್ರಕ್ಕೆ ತೆರಿಗೆ ನೀಡುವಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 2 ನೇ ಸ್ಥಾನದಲ್ಲಿದೆ ಇನ್ನೇನು ಕೊಡುಗೆ ಕೊಡಬೇಕು? ಎಂದು ಪ್ರಶ್ನಿಸಿದರು.
ಅವರೇ 2023-24 ನೇ ಬಜೆಟ್ ನಲ್ಲಿ ಹೇಳಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5300 ಕೋಟಿಗಳನ್ನು ಕೊಟ್ಟಿಲ್ಲ . ಅವರ ಘೋಷಣೆ ನೋಡಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಜೆಟ್ ನಲ್ಲಿ ಪುನರುಚ್ಚರಿಸಿದ್ದರು ಎಂದರು.
*ಕೇಂದ್ರ ಸರ್ಕಾರ 15 ಲಕ್ಷ ಕೋಟಿ ಸಾಲ ಮಾಡಿದೆ*.
ಕೇಂದ್ರದ ಧೋರಣೆಗೆ ನೀತಿ ಆಯೋಗದ ಸಭೆಯನ್ನು ನಾವು ಬಹಿಷ್ಕರಿಸಿದೆವು. ತಮಿಳುನಾಡು, ತೆಲಂಗಾಣ ಹಾಗೂ ಬಿಜೆಪಿ ವಿರುದ್ಧವಾಗಿರುವ ಅನೇಕ ರಾಜ್ಯಗಳು ಹೋಗಿಲ್ಲ. ಮಮತಾ ಬ್ಯಾನರ್ಜಿ ಅವರು ಸಭೆಗೆ ಹಾಜರಾಗಿ ಮಾತನಾಡಲು ಸಮಯ ನೀಡಿಲ್ಲ ಎಂದು ಸಭೆಯಿಂದ ಹೊರನಡೆದರು ಎಂದರು. ಇವರು ನಮಗೆ ಪಾಠ ಹೇಳಿಕೊಡುತ್ತಾರೆ. ಇವರ ತಪ್ಪುಗಳಿಗೆ ಇಂದು ದೇಶದಲ್ಲಿ ಹೂಡಿಕೆಯಾಗುತ್ತಿಲ್ಲ. ನಾವು ಸಾಲ ಹೆಚ್ಚು ಮಾಡಿದ್ದೇವೆ ಎನ್ನುತ್ತಾರೆ. ನಾವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ಜಿಡಿಪಿಯ ಶೇ 25% ರೊಳಗೇ ಇದ್ದೇವೆ. ಅವರು ಸುಮಾರು 15 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದರು.
*ಕರ್ನಾಟಕ ಭ್ರಷ್ಟ ರಾಜ್ಯವಲ್ಲ*
ಕರ್ನಾಟಕದ ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಕರ್ನಾಟಕ ಭ್ರಷ್ಟ ರಾಜ್ಯ ಎಂದು ಅವರು ಮಸಿ ಬಳಿಯುತ್ತಿದ್ದಾರೆ. ಕರ್ನಾಟಕ ಭ್ರಷ್ಟ ರಾಜ್ಯವಲ್ಲ. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ ಎಂದರು.
*ಹೂಡಿಕೆ ಕುರಿತು ಸ್ಪಷ್ಟನೆ*
ಕರ್ನಾಟಕದಲ್ಲಿ ಕೈಗಾರಿಕೆಗಳು ಹೂಡಿಕೆ ಮಾಡಲು ಮುಂದಾಗುತ್ತಿಲ್ಲ ಎಂಬ ಕೇಂದ್ರ ಹಣಕಾಸು ಸಚಿವರ ಹೇಳಿಕೆಗೆ ಸಂಬಂಧಪಟ್ಟಂತೆ ಎಂ. ಬಿ.ಪಾಟೀಲ್ ಹಾಗೂ ಪ್ರಿಯಾಂಕ ಖರ್ಗೆಯವರಿಗೆ ಈ ಬಗ್ಗೆ ಮಾತನಾಡಲು ಸೂಚಿಸುವುದಾಗಿ ಹೇಳಿದರು.
*ಬಿಜೆಪಿ ಪಾದಯಾತ್ರೆ: ರಾಜಕೀಯವಾಗಿ ವಿರೋಧಿಸುತ್ತೇವೆ*
ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ವಾಲ್ಮೀಕಿ ಮತ್ತು ಮೂಡಾ ಹಗರಣದ ಬಗ್ಗೆ ಪ್ರತಿಭಟಿಸಿ ಪಾದಯಾತ್ರೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಮಾಡಲಿ. ನಾವೂ ಕೂಡ ರಾಜಕೀಯವಾಗಿ ವಿರೋಧಿಸುತ್ತೇವೆ. ವಾಲ್ಮೀಕಿ ಹಗರಣದಲ್ಲಿ ನಾವು 84.63 ಕೋಟಿ ಹಗರಣವಾಗಿದೆ ಎನ್ನುವುದು ನಿಜ. ಎಸ್.ಐ.ಟಿ ರಚನೆಯಾಗಿದ್ದು ತನಿಖೆಯಾಗುತ್ತಿದೆ. ಅವರೂ ಕೂಡ ಸಿಬಿಐ, ಇಡಿ ಯಾವರೂ ತನಿಖೆ ಮಾಡುತ್ತಿದ್ದಾರೆ ಎಂದರು.
*ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ?*
ಉಪಮುಖ್ಯಮಂತ್ರಿಗಳು ಅಯೋಗ್ಯ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಹೇಳಿರುವ ಬಗ್ಗೆ ಬಿಜೆಪಿ ಅಯೋಗ್ಯ ಅಧಿಕಾರಿಗಳನ್ನು ಸರ್ಕಾರ ಏಕೆ ಇಟ್ಟುಕೊಂಡಿದೆ ಎಂದು ಹೇಳಿರುವ ಬಗ್ಗೆ ಮಾತನಾಡಿ ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಅದಕ್ಕಾಗಿಯೇ 21 ಹಗರಣಗಳನ್ನು ಪಟ್ಟಿ ಮಾಡಿ ಹೇಳಿದ್ದೇನೆ ಎಂದರು. ಕೆಲವು ತನಿಖೆಗಳು ನಡೆಯುತ್ತಿವೆ
ರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಇಂದಿನವರೆಗೂ ಸಿಬಿಐ ತನಿಖೆ ಪೂರ್ಣಗೊಳಿಸಿಲ್ಲ.ಅವರ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐ ಗೆ ಕೊಟ್ಟಿಲ್ಲ. 7-8 ಹಗರಣಗಳನ್ನು ಸಿಬಿಐ ಗೆ ವಹಿಸಲಾಗಿದೆ. ಇದೆ ಬಿಜೆಪಿ ನಾವು ಅಧಿಕಾರದಲ್ಲಿದ್ದಾಗ ಸಿಬಿಐ ಯ ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಈಗ ಸಿಬಿಐ ಗೆ ಮೇಲೆ ಇವರಿಗೇನು ಪ್ರೀತಿ ಎಂದರು. ಈ ಕುರಿತ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದರು.
*ನನ್ನ ಮೇಲೆ ಯಾವ ಕಪ್ಪು ಮಸಿಯೂ ಇಲ್ಲ*
ಮೂಡಾ ಪ್ರಕರಣದಲ್ಲಿ ನಿವೇಶನಗಳನ್ನು ಸಿಎಂ ಹಿಂದಿರುಗಿಸಿ ತನಿಖೆಗೆ ಅವಕಾಶ ಕೊಡಬೇಕೆಂದು ಬಿಜೆಪಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮೂಡಾ ಪ್ರಕರಣದಲ್ಲಿ ನನ್ನ ಮೇಲೆ ಯಾವ ಕಪ್ಪು ಮಸಿಯೂ ಇಲ್ಲ. ಈ ಬಗ್ಗೆ ನ್ಯಾಯಾಂಗ ಆಯೋಗ ರಚನೆಯಾಗಿದೆ. ಬಿಜೆಪಿ ಯಾವುದೇ ನ್ಯಾಯಾಂಗ ತನಿಖೆ ರಚಿಸಿತ್ತೆ ಎಂದು ಪ್ರಶ್ನಿಸಿದರು. ಕೋವಿಡ್ 19 ಸಂದರ್ಭದಲ್ಲಿ 3 ರಿಂದ 4 ಸಾವಿರ ಕೋಟಿ ರೂಪಾಯಿ ನುಂಗಿ ಹಾಕಿದ್ದಾರೆ. ನ್ಯಾಯಾಂಗ ತನಿಖೆ ಅಥವಾ ಸಿಬಿಐ ಗೆ ವಹಿಸಲು ಕೊಡಿ ಎಂಡು ಒತ್ತಾಯಿಸಿದೆ. ಆದರೆ ಅವರು ಕೊಡಲಿಲ್ಲ ಎಂದರು. ಯಾವುದೇ ತಪ್ಪಿಲ್ಲದಿದ್ದರೂ ಕೂಡ ಜನರ ಮನಸ್ಸಿನಲ್ಲಿ ಅನುಮಾನವಿರಬಾರದು ಎಂಬ ಕಾರಣಕ್ಕೆ ನ್ಯಾಯಾಂಗ ಆಯೋಗ ರಚಿಸಲಾಗಿದೆ ಎಂದರು. ಒಬ್ಬ ಸಚಿವರು, ಮುಖ್ಯಮಂತ್ರಿಯಾಗಿದ್ದವರು ಹೇಗೆ ಮಾತನಾಡಿದರೆ ಹೇಗೆ? ನಮಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ ಎಂದರು.
*ಬಿಜೆಪಿಯವರು ಸುಳ್ಳು ಹೇಳುವುದು ಹಾಗೂ ಬ್ಲಾಕ್ ಮೇಲ್ ಮಾಡುವುದರಲ್ಲಿ ನಿಸ್ಸೀಮರು*
ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಲ್ಲದ ಆರೋಪ ಈಗ ಬಂದಿರುವುದಕ್ಕೆ ಬೇಸರವಾಗಿದೆಯೇ ಎಂಬಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ನಾನು ತಪ್ಪು ಮಾಡಿದ್ದರೆ ನನಗೆ ಬೇಸರವಾಗುತ್ತದೆ. ನಾನು ತಪ್ಪು ಮಾಡಿಲ್ಲ ಎಂದರು. ಬಿಜೆಪಿ ಯವರು ಸುಳ್ಳು ಹೇಳುವುದರಲ್ಲಿ, ಬ್ಲಾಕ್ ಮೇಲ್ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ಯಾವ ಸಿದ್ದಾಂತವಿದೆ. ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ವಿರುದ್ದವಾಗಿದ್ದಾರೆ ಎಂದರು.
*ಮುಡಾದಿಂದ ಎಷ್ಟು ನಿವೇಶನಗಳು ದೇವೇಗೌಡರ ಕುಟುಂಬಕ್ಕೆ ಹೋಗಿದೆ?*
ಬಹಳ ಮಾತನಾಡುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯವರು 1984 ರಲ್ಲಿ ಕೈಗಾರಿಕಾ ನಿವೇಶನವನ್ನು ಪಡೆದರು. ಸ್ವಾದೀನಕ್ಕೆ ಕೂಡ ಪಡೆದಿದ್ದಾರೆ. ನಂತರ ಬದಲಿ ನಿವೇಶನಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. ಕೈಗಾರಿಕೆ ಮಾಡಿದ್ದಾರೆಯೇ? ಎಂಡಿ ಕೇಳಿದರು. ಸಿ ಐ ಡಿಬಿ ಇರುವಾಗ
ಪುಟ್ಟಯ್ಯ ಇರುವಾಗ ಎಷ್ಟು ನಿವೇಶನಗಳು ದೇವೇಗೌಡರ ಕುಟುಂಬಕ್ಕೆ ಹೋಗಿದೆ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
*ದೆಹಲಿ ಪ್ರವಾಸ*
ಸರ್ಕಾರ ಹಾಗೂ ಪಕ್ಷದ ಬಗ್ಗೆ ಚರ್ಚೆ ಮಾಡಲು ವರಿಷ್ಠರು ಕರೆದಿದ್ದಾರೆ .ಹಾಗಾಗಿ ನಾನೂ ಮತ್ತು ಉಪಮುಖ್ಯಮಂತ್ರಿಗಳು ದೆಹಲಿಗೆ ಭೇಟಿ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ಸಿದ್ಧ*
ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆಯಾಗದಿದ್ದರೂ ಮಾತನಾಡಲು ಅವರು ಸಿದ್ದರಿಲ್ಲ.ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೇ ನಾವು ನಿರ್ಮಾಣ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಾಂಗ್ಲಾದೇಶದಿಂದ 20 ಸಾವಿರ ಜನ ಬೆಂಗಳೂರಿಗೆ ವಲಸೆ ಬಂದಿರುವ ಬಗ್ಗೆ ಮಾತನಾಡಿ ಈ ಬಗ್ಗೆ ತಿಳಿದಿಲ್ಲ. ವಿಚಾರ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.