ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯವೊಂದರಲ್ಲಿ 50 ವರ್ಷದ ಮಹಿಳೆ ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಮೆರಿಕ ಪಾಸ್‌ಪೋರ್ಟ್‌ನ ಫೋಟೋಕಾಪಿ ಮತ್ತು ತಮಿಳುನಾಡು ವಿಳಾಸ ಇರುವ ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳು ಮಹಿಳೆ ಬಳಿ ಪತ್ತೆಯಾಗಿವೆ. ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಮುಂಬೈಯಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಕುರಿಗಾಯಿಯೊಬ್ಬ ಆಕೆ ಅಳುವುದನ್ನು ಕೇಳಿದ್ದಾನೆ. ಅಲ್ಲದೆ, ಆಕೆಯನ್ನು ಸರಪಳಿಯಲ್ಲಿ ಮರಕ್ಕೆ ಕಟ್ಟಿಹಾಕಿರುವುದು ಮತ್ತು ಸಂಕಷ್ಟದಲ್ಲಿರುವುದನ್ನು ಕಂಡು ಪೊಲೀಸರನ್ನು ಎಚ್ಚರಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ಮಹಿಳೆಯನ್ನು ಸಾವಂತವಾಡಿ (ರಾಜ್ಯದ ಕೊಂಕಣ ಪ್ರದೇಶದಲ್ಲಿ) ಮತ್ತು ನಂತರ ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಮಾನಸಿಕ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಆಕೆಯನ್ನು ಉನ್ನತ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಆಕೆ ಅಪಾಯದಿಂದ ಪಾರಾಗಿದ್ದಾಳೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಕೆ ಮನೋವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ ಎಂಬುದನ್ನು ನಾವು ಆಕೆಯ ಬಳಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳನ್ನು ಕಂಡುಕೊಂಡಿದ್ದೇವೆ ಎಂದು ಹೇಳಿದರು.
” ತಮಿಳುನಾಡು ವಿಳಾಸ ಇರುವ ಆಕೆಯ ಆಧಾರ್ ಕಾರ್ಡ್ ಮತ್ತು ಅಮೆರಿಕದ ಪಾಸ್‌ಪೋರ್ಟ್‌ನ ನಕಲು ಪ್ರತಿ ಆಕೆಯ ಬಳಿ ಪತ್ತೆಯಾಗಿದೆ. ಆಕೆಯನ್ನು ಲಲಿತಾ ಕಯಿ ಎಂದು ಗುರುತಿಸಲಾಗಿದೆ. ಆಕೆಯ ವೀಸಾ ಅವಧಿ ಮುಗಿದಿದೆ. ಆಕೆಯ ರಾಷ್ಟ್ರೀಯತೆ ಯಾವುದು ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ” ಎಂದು ಅವರು ಹೇಳಿದರು.ಪೊಲೀಸರು ಪಡೆದ ಪ್ರಾಥಮಿಕ ಮಾಹಿತಿಯಂತೆ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.”ಮಹಿಳೆ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಕೆಲದಿನಗಳಿಂದ ಏನನ್ನೂ ತಿನ್ನದ ಕಾರಣ ಮಹಿಳೆ ದುರ್ಬಲಳಾಗಿದ್ದಾಳೆ ಹಾಗೂ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಎಷ್ಟು ದಿನದಿಂದ ಆಕೆ ಕಟ್ಟಿಹಾಕಿದ ಸ್ಥಿತಿಯಲ್ಲಿದ್ದಳು ಎಂಬುದು ಗೊತ್ತಿಲ್ಲ. ಆಕೆಯ ಪತಿ ತಮಿಳುನಾಡಿನಿಂದ ಬಂದು, ಆಕೆಯನ್ನು ಅಲ್ಲಿ ಕಟ್ಟಿಹಾಕಿ ಪರಾರಿಯಾಗಿರಬಹುದು ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾರೆ. ತನಿಖೆಯ ಭಾಗವಾಗಿ ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ತಮಿಳುನಾಡು, ಗೋವಾ ಮತ್ತು ಇತರ ಕೆಲವು ಸ್ಥಳಗಳಿಗೆ ತೆರಳಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.