ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಭೀತಿಯಲ್ಲಿರುವ ಖಾನಾಪೂರ ತಾಲೂಕಿನ ಮಲಪ್ರಭಾ ಬ್ರಿಡ್ಜ್ ಮತ್ತು ರುಮೇವಾಡಿ ಬ್ಯಾರೇಜ್ ವೀಕ್ಷಿಸಿ, ಪ್ರವಾಹದಿಂದ ನಾಶವಾಗಿರುವ ಮನೆ, ಬೆಳೆ ಹಾಗೂ ಬ್ರಿಡ್ಜ್ ಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಖಾನಾಪೂರ ತಾಲೂಕಿನ ಪಶ್ಚಿಮಘಟ್ಟಗಳ ಪ್ರದೇಶದಲ್ಲಿರುವ ಗುಡ್ಡದ ಮಧ್ಯೆಯದಲ್ಲಿರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಮಳೆಯಿಂದ ಜೀವಹಾನಿಯಾಗದಂತೆ ಕ್ರಮಕೈಗೊಳ್ಳಲಾಗುವುದು. ಅರಣ್ಯ‌ ಇಲಾಖೆಯ ಕಠಿಣ ನಿಲುವುಗಳಿಂದ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂದರು.

ಮನೆ ಬಿದ್ದ ತಕ್ಷಣ 1.20 ಲಕ್ಷ ರೂಪಾಯಿ ಹಣ, ಜೊತೆಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 1.80 ಲಕ್ಷ ಹಣ ನೀಡಲಾಗುತ್ತಿದ್ದು, ಭಾಗಶಃ ಬಿದ್ದ ಮನೆಗೆ ನೀಡಲಾಗುತ್ತಿರುವ ಮೊತ್ತವನ್ನು 10 ಸಾವಿರ‌ ರೂಪಾಯಿಂದ 50 ಸಾವಿರ ರೂಪಾಯಿಗೆ ಏರಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಮಳೆಗಾಲದ ವೇಳೆ ಬೆಳಗಾವಿ – ಗೋವಾ ನಡುವಿನ ಮುಖ್ಯ ರಸ್ತೆ ಜಾಮ್ ಆಗುತ್ತಿದ್ದು, ಶೀಘ್ರವೇ ಗೋವಾ ಮುಖ್ಯ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, 100 ಕೋಟಿ ವೆಚ್ಚದಲ್ಲಿ ಹಟ್ಟಿಹೊಳಿ ಬ್ರಿಡ್ಜ್ ನಿರ್ಮಾಣವಾಗಲಿದೆ ಎಂದು‌ ಹೇಳಿದರು.

*ಬಿಜೆಪಿಯವರ ಪಾದಯಾತ್ರೆಗೆ ಶುಭವಾಗಲಿ*
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪಾದಯಾತ್ರೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ಶುಭಾಶಯಗಳು, ಮಳೆ ಬರುತ್ತಿರುವ ಕಾರಣ ಒಳ್ಳೆಯ ಶೂ, ರೈನ್ ಕೋಟ್ ತೆಗೆದುಕೊಂಡು ಹೋಗಲಿ ಎಂದು ಸಚಿವರು ಹೇಳಿದರು.

ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ನೀರಾವರಿ ಹಾಗೂ ಕಂದಾಯ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಮೂಲಸೌಕರ್ಯ ಕೊರತೆಯ ಹಿನ್ನೆಲೆಯಲ್ಲಿ ಅನಾರೋಗ್ಯ ಪೀಡಿತ ಮಹಿಳೆಯನ್ನು ಗ್ರಾಮಸ್ಥರು ಹೊತ್ತು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ
ಖಾನಾಪುರ ತಾಲೂಕಿನ ಅಮಗಾಂವ್ ಗ್ರಾಮದ ಮಹಿಳೆಯ ಕುಟುಂಬಸ್ಥರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸೋಮವಾರ ಆರ್ಥಿಕ ಸಹಾಯ ನೀಡಿದರು.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡಿರುವ ಹಿರೇ ಬಾಗೇವಾಡಿ ಗ್ರಾಮದ ಪಾರ್ವತಿ ಯಮ್ಮಿನಕಟ್ಟಿ, ಚಂಬಣ್ಣ ತಲ್ಲೂರ್, ಕಾಶವ್ವ ಪಡಗಲ್ ಹಾಗೂ ಸುಶೀಲಾ ನಾವಲಗಿ ಮತ್ತಿತರರನ್ನು ಭೇಟಿ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಂತ್ರಸ್ತರಿಗೆ ಧೈರ್ಯ ತುಂಬಿ, ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.