ಬೆಳಗಾವಿ: ಖಾನಾಪುರ ತಾಲೂಕು ಕೃಷ್ಣಾಪುರ ಗ್ರಾಮದಲ್ಲಿ ರಸ್ತೆ ಸಂಪರ್ಕ ಇಲ್ಲದ ಕಾರಣ ಮೃತ ವ್ಯಕ್ತಿಯ ಶವವನ್ನು 6 ಕಿ.ಮೀ ವರೆಗೆ ಹೊತ್ತುಕೊಂಡೇ ಹೋದ ಘಟನೆ ಬೆಳಕಿಗೆ ಬಂದಿದೆ. ಭೀಮಗಡ ಅಭಯಾರಣ್ಯ ಪ್ರದೇಶದಲ್ಲಿರುವ ಕೃಷ್ಣಾಪುರ ಗ್ರಾಮದ ಸದಾನಂದ ನಾಯಕ ಜ್ವರದಿಂದ ಬಳಲುತ್ತಿದ್ದರು. ಕುಟುಂಬಸ್ಥರು ಚಿಕಿತ್ಸೆಗೆ ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಗೋವಾದಿಂದ ಅವರ ಮೃತದೇಹವನ್ನು ಕುಟುಂಬಸ್ಥರು ಹೊತ್ತುಕೊಂಡು ಬಂದರು. ಆಗ ಗ್ರಾಮಸ್ಥರು ನೆರವಾಗಿ ಅಂತ್ಯಸಂಸ್ಕಾರಕ್ಕೆ ಶವವನ್ನು ಸುಮಾರು ಆರು ಕಿಲೋಮೀಟರ್ ವರೆಗೆ ಹೊತ್ತುಕೊಂಡೆ ಬಂದಿದ್ದಾರೆ. ಬಂಡೂರಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಿಗೆಯ ತೂಗು ಸೇತುವೆ ಮೇಲೆ ಶವ ಹೊತ್ತುಕೊಂಡು ಸಾಗಿರುವ ವಿಡಿಯೋ ವೈರಲ್ ಆಗಿದೆ. ಖಾನಾಪುರದ ಕಾಡಂಚಿನ ಗ್ರಾಮಗಳಲ್ಲಿ ಸದಾ ಇಂಥ ಪರಿಸ್ಥಿತಿ ಇದೆ. ಇತ್ತೀಚಿಗಷ್ಟೇ ಮಹಿಳೆ ಅನಾರೋಗ್ಯದಿಂದ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.