ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೆ (ಎಸ್‌ಸಿ/ಎಸ್‌ಟಿ) ಇದ್ದ ಶೇಕಡಾ 50ರಷ್ಟು ಮೀಸಲಾತಿಯನ್ನು ಶೇ. 65ಕ್ಕೆ ಹೆಚ್ಚಿಸಿ 2023ರಲ್ಲಿ ಬಿಹಾರ ಶಾಸಕಾಂಗ ಮಾಡಿದ್ದ ತಿದ್ದುಪಡಿಗಳನ್ನು ರದ್ದುಪಡಿಸಿದ್ದ ಪಾಟ್ನಾ ಹೈಕೋರ್ಟ್‌ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.
ಸೆಪ್ಟೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತಾದರೂ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು.
ತಿದ್ದುಪಡಿ ಮಾಡಲಾದ ಕಾಯಿದೆಗಳು ಉದ್ಯೋಗ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಸಮಾನ ಅವಕಾಶ ನಿರಾಕರಿಸುತ್ತವೆ ಎಂದು ತಿಳಿಸಿ ಹೈಕೋರ್ಟ್ ಜೂನ್ 20 ರಂದು ತೀರ್ಪು ನೀಡಿತ್ತು. ಬಿಹಾರ ಸರ್ಕಾರ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಸರ್ಕಾರಿ ಸೇವೆಯಲ್ಲಿ ತುಲನಾತ್ಮಕವಾಗಿ ಎಸ್‌ಸಿ, ಎಸ್‌ ಟಿ ಮತ್ತು ಹಿಂದುಳಿದ ವರ್ಗಗಳ ಸದಸ್ಯರ ಸಂಖ್ಯೆ ಕಡಿಮೆ ಇದೆ ಎಂಬ ದತ್ತಾಂಶ ಆಧರಿಸಿ ಶಾಸಕಾಂಗ 1991ರ ಕಾಯಿದೆಗೆ ತಿದ್ದುಪಡಿ ಮಾಡಿತ್ತು. ಅದರಂತೆ ಮೀಸಲಾತಿ ವರ್ಗಗಳ ಒಟ್ಟು ಮೀಸಲಾತಿಯನ್ನು 2023ರಲ್ಲಿ ಶೇ 65ಕ್ಕೆ ಹೆಚ್ಚಿಸಲಾಗಿತ್ತು. ಈ ನಿರ್ಧಾರದಿಂದಾಗಿ ಸಾಮಾನ್ಯ ಅರ್ಹತೆಯ ವರ್ಗದವರಿಗೆ ಇದ್ದ ಅವಕಾಶ ಶೇ 35ಕ್ಕೆ ಇಳಿದಿತ್ತು.
ಹಿಂದುಳಿದ ಸಮುದಾಯಗಳು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ಮತ್ತು ಅರ್ಹತೆಯ ಕಾರಣದಿಂದ ಸಾಕಷ್ಟು ಪ್ರಾತಿನಿಧ್ಯವನ್ನು ಪಡೆದಿರುವುದನ್ನು ಸರ್ಕಾರವೇ ಅವಲಂಬಿಸಿರುವ ಜಾತಿ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತರ್ಕಿಸಿತ್ತು.

ಶೇ 50 ರಷ್ಟು ಮಿತಿಯೊಳಗೆ ಮೀಸಲಾತಿ ನೀಡುವ ಕುರಿತಂತೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಸೌಲಭ್ಯಗಳಿಂದ ‘ಕೆನೆ ಪದರ’ ವರ್ಗವನ್ನು ಹೊರಗಿಡಬೇಕು ಎಂದು ಹೈಕೋರ್ಟ್ ಹೇಳಿತ್ತು.