ದೆಹಲಿ: ಲೋಕಸಭೆಯಲ್ಲಿ ಒಬ್ಬರು ಮುಖ್ಯ ಸಚೇತಕ ಮತ್ತು 16 ಸಂಸದರನ್ನು ಸಚೇತಕರನ್ನಾಗಿ ನೇಮಕ ಮಾಡಿ ಬಿಜೆಪಿ ಸಂಸದೀಯ ಮಂಡಳಿ ಕಾರ್ಯದರ್ಶಿ ಶಿವಭಕ್ತಿನಾಥ ಭಕ್ಷಿ ಆದೇಶ ಹೊರಡಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚೇತಕ ಹುದ್ದೆ ಒಲಿದು ಬಂದಿದೆ. 16 ಜನರಲ್ಲಿ ಶ್ರೀನಿವಾಸ ಪೂಜಾರಿ ಅವರಿಗೆ ಸ್ಥಾನ ಸಿಕ್ಕಿದೆ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲೂ ಇದೀಗ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ತೊಂದು ಹಂತ ಮೇಲೇರಿದ್ದಾರೆ. ತಮ್ಮನ್ನು ಸಚೇತಕರನ್ನಾಗಿ ನೇಮಕ ಮಾಡಿದ ಪಕ್ಷಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ದಾ ಹಾಗೂ ನಾಯಕರಿಗೆ ಅವರು ಅಭಿನಂದಿಸಿದ್ದಾರೆ. ಈ ಮೊದಲು ಅವರು ಕರ್ನಾಟಕದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ, ಪರಿಷತ್ ಪ್ರತಿಪಕ್ಷ ನಾಯಕರಾಗಿ ಹಾಗೂ ಸಚಿವರಾಗಿ ತಮ್ಮ ವಾಕ್ಛಾತುರ್ಯದ ಮೂಲಕ ಹೆಸರು ಗಳಿಸಿದ್ದರು. ಮುಂದಿನ ದಿನಗಳಲ್ಲಿ ಅವರು ಲೋಕಸಭೆಯಲ್ಲಿ ಕರಾವಳಿ ಹಾಗೂ ಕರ್ನಾಟಕದ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಹುಮುಖ್ಯ ಪಾತ್ರ ವಹಿಸಲಿ ಎನ್ನುವುದು ಜನತೆಯ ಆಶಯವಾಗಿದೆ.