ಬೆಳಗಾವಿ: ದೂರದ ಕಾಶಿವರೆಗೂ ಈ ಮೊದಲು ಯಾತ್ರಿಕರು ನಡೆದುಕೊಂಡೆ ಕಾಶಿ ವಿಶ್ವನಾಥ ದೇವರ ದರ್ಶನ ಪಡೆಯುತ್ತಿದ್ದರು. ಆಗ ಅವರ ಜೊತೆ ಮನೆಯ ನಾಯಿ ಹಿಂಬಾಲಿಸಿ ಮತ್ತೆ ವಾಪಸ್ಸು ಮನೆ ಸೇರುತ್ತಿತ್ತು ಎಂಬ ಮಾತು ಚಲಾವಣೆಯಲ್ಲಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಮನೆ ಮಾಲೀಕನನ್ನು ಹುಡುಕಿಕೊಂಡು ಸುಮಾರು 200 ಕಿಲೋ ಮೀಟರ್ ದೂರ ತೆರಳಿದ್ದ ನಾಯಿ ಮತ್ತೆ ಮನೆಗೆ ಮರಳಿರುವ ಘಟನೆ ಬೆಳಕಿಗೆ ಬಂದಿದೆ.

ಆಷಾಢ ಏಕಾದಶಿ ನಿಮಿತ್ತ ಪಂಢರಾಪುರದಲ್ಲಿನ ವಿಠ್ಠಲ ದೇವರ ದರ್ಶನಕ್ಕೆ ನಿಪ್ಪಾಣಿಯ ಯಮಗರ್ಣಿಯ ಸಂತರು ತೆರಳಿದ್ದರು. ಜ್ಞಾನದೇವ ಕುಂಬಾರ ಅವರ ಸಾಕು ನಾಯಿ ‘ಮಹಾರಾಜ’ ಸಹಾ ಅವರ ಜೊತೆ ಹಿಂಬಾಲಿಸಿತ್ತು. ಆದರೆ, ಪಂಢರಪುರದಲ್ಲಿ ಜನಸಾಗರದಲ್ಲಿ ನಾಯಿ ತಪ್ಪಿಸಿಕೊಂಡಿದೆ. ಕೊನೆಗೂ ಈ ನಾಯಿ ಜುಲೈ 22ರಂದು ಮತ್ತೆ ಮನೆ ಸೇರಿದೆ. ಆರು ವರ್ಷಗಳಿಂದ ಮಹಾರಾಜ ಎಂಬ ಹೆಸರಿನ ಈ ನಾಯಿಯನ್ನು ನಾವು ಸಾಕುತ್ತಿದ್ದೆವು. ಜುಲೈ ಆರರಂದು ನಾವು ಒಟ್ಟು 140 ವಿಠ್ಠಲ ದೇವರ ಭಕ್ತರು ಪವಿತ್ರ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಸಾಗಿದ್ದೆವು. ಆಗ ನಾಯಿ ನಮ್ಮ ಹಿಂಬಾಲಿಸಿತು. ನಾವು ತವರಿಗೆ ಜುಲೈ 18ರಂದು ಮರಳಿದೆವು. ಪಂಢರಾಪುರದಲ್ಲಿ ತಪ್ಪಿಸಿಕೊಂಡಿದ್ದ ನಮ್ಮ ನಾಯಿ ಜುಲೈ 22ರಂದು ಅಂದರೆ ನಾಲ್ಕು ದಿನಗಳ ನಂತರ ನಮ್ಮ ಮನೆಗೆ ಬಂದು ತಲುಪಿದೆ. ಇದರಿಂದ ನಾವೆಲ್ಲ ಬಹಳ ಸಂತಸಪಟ್ಟು ಅದಕ್ಕೆ ಗುಲಾಲು ಎರಚಿ ಮಾಲೆ ಹಾಕಿ ಖುಷಿಪಟ್ಟಿದ್ದೇವೆ ಎಂದು ಜ್ಞಾನದೇವ ಹೇಳಿದರು.