ಉಡುಪಿ : ತುಳು ಕೂಟ ಉಡುಪಿ ( ರಿ) ವತಿಯಿಂದ ಆಷಾಢ ಅಮಾವಾಸ್ಯೆಯ ಸಾಂಪ್ರದಾಯಿಕ ಆಚರಣೆ ಭಾನುವಾರ ನಡೆಯಿತು.

ಪ್ರತಿ ವರ್ಷದಂತೆ ಈ ಬಾರಿಯೂ ಆಟಿದ ಅಮಾವಾಸ್ಯೆ ಕಷಾಯವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ನಾಡಿನ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಮೂಡಿ ಬಂತು.
ಪ್ರಾಚ್ಯ ವೈದ್ಯರತ್ನ ಸತೀಶ್ ಮುದ್ದು ಶೆಟ್ಟಿಗಾರ್ ದಂಪತಿಗಳು ಪಾಲಕೆತ್ತೆಯ ಕಷಾಯವನ್ನು ಕ್ರಮಬದ್ಧ ರೀತಿಯಲ್ಲಿ ಸಿದ್ಧಪಡಿಸಿ ಅದನ್ನು ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದರು. ಕಷಾಯದ ತರುವಾಯ ಬೆಲ್ಲದ ಬದಲಿಗೆ ಜಾರಿಗೆ ಹುಳಿಯನ್ನು ಚೀಪಿ ತಿನ್ನುವ ಮರೆತು ಹೋದ ಸಾಂಪ್ರದಾಯಿಕ ಕ್ರಮವನ್ನು ಈ ಕಾರ್ಯಕ್ರಮದಲ್ಲಿ ನೆನಪಿಸಿಕೊಳ್ಳಲಾಗಿತ್ತು.
ಕಷಾಯದ ಜೊತೆಗೆ ವಿಶೇಷವಾಗಿ ಸೀತಾಳೆ ಸಸ್ಯದ ತಿರುಳು ಪನೊಲಿ ಬಂದವನ್ನು ಬಳಸಿ ಹಾಲು ಗಂಜಿಯನ್ನು ತಯಾರಿಸಿ ವಿತರಿಸಲಾಗಿರುವುದು ಈ ಬಾರಿಯ ವಿಶೇಷತೆ.
ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಪ್ರೊಫೆಸರ್ ಕೃಷ್ಣಯ್ಯ ಎಸ್ ಎ ಇವರು ಈ ಬಗ್ಗೆ ಮಾಹಿತಿ ಮಾರ್ಗದರ್ಶನ ಮಾಡಿದರು.
ಲಯನ್ಸ್ ಕ್ಲಬ್ ಇಂದ್ರಾಳಿಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಕಷಾಯ ಲಭ್ಯವಾಗಿತ್ತು.
ಕಾರ್ಯಕ್ರಮದಲ್ಲಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಲಯನ್ಸ್ ಇಂದ್ರಾಳಿಯ ಅಧ್ಯಕ್ಷ ಲಕ್ಷ್ಮಿಕಾಂತ್ ಬೆಸ್ಕೂರು, ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ತುಳು ಕೂಟದ ಸದಸ್ಯರು ಉಪಸ್ಥಿತರಿದ್ದರು.