ಸತಾರಾ: ಸೆಲ್ಫಿ ತೆಗೆದುಕೊಳ್ಳುವಾಗ ಯುವತಿಯೊಬ್ಬಳು 100 ಅಡಿ ಆಳದ ಕಮರಿಗೆ ಬಿದ್ದಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್‌ನಲ್ಲಿ ನಡೆದಿದೆ. ಭಾರೀ ಮಳೆಯಾಗುತ್ತಿರುವ ಪ್ರದೇಶಕ್ಕೆ ಅವರು ಶನಿವಾರ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.ಆದರೆ ಸ್ಥಳೀಯರು ಹಗ್ಗವನ್ನು ಬಳಸಿ ಆಕೆಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಥಳೀಯರು ದಪ್ಪ ಹಗ್ಗವನ್ನು ಕಮರಿಗೆ ಎಸೆದಿದ್ದು ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ವ್ಯಕ್ತಿಯೊಬ್ಬರು ಇಳಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮರಳಿ ಕರೆತರುವಾಗ ಆಕೆ ನೋವಿನಿಂದ ಅಳುವುದು ಕೇಳುತ್ತದೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ತೀವ್ರ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆದರೆ ಅಪಾಯದಿಂದ ಪಾರಾಗಿದ್ದಾಳೆ.