ನವದೆಹಲಿ: ಹಿಂಸಾಪೀಡಿತ ಬಾಂಗ್ಲಾದೇಶದಿಂದ ಅಕ್ಷರಶಃ ತಪ್ಪಿಸಿಕೊಂಡು ಬಂದು ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಇಂಗ್ಲೆಂಡ್ಗೆ ಹೋಗಿ ಅಲ್ಲೇ ಶಾಶ್ವತವಾಗಿ ಆಶ್ರಯ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.
ಈ ಮಧ್ಯೆ, ಅವರು ಭಾರತಕ್ಕೆ ಬಂದಿದ್ದೇ ರೋಚಕ. ತೀವ್ರ ಹಿಂಸಾಚಾರ ಹಿನ್ನೆಲೆಯಲ್ಲಿ ಹಸೀನಾಗೆ ಜೀವಭಯ ಶುರುವಾಗಿತ್ತು. ಭಾರತದತ್ತ ಮುಖ ಮಾಡಿದ ಹಸೀನಾಗೆ ಭದ್ರತೆ ನೀಡಿದ್ದು ರಫೇಲ್ ಯುದ್ಧ ವಿಮಾನಗಳು ಎಂಬುದು ವಿಶೇಷ.
ಬಾಂಗ್ಲಾ ತೊರೆಯುವ ನಿರ್ಧಾರ ಮಾಡಿದ್ದ ಹಸೀನಾ ಸೋಮವಾರ ಮಧ್ಯಾಹ್ನ ವಾಯುಪಡೆಯು ವಿಮಾನ ಹತ್ತಿ ಭಾರತದತ್ತ ಮುಖ ಮಾಡಿದ್ದರು.
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಭಾರತೀಯ ವಾಯುಪಡೆಯ ರಡಾರ್, ಹಸೀನಾ ಇರುವ ವಿಮಾನವನ್ನು ಗುರುತಿಸಿದೆ. ಬಾಂಗ್ಲಾದೇಶದಿಂದ-ಭಾರತದ ಗಡಿಯತ್ತ ಬರುತ್ತಿದ್ದ ವಿಮಾನವನ್ನು ಪತ್ತೆ ಮಾಡಿತ್ತು.
ಜೆಟ್ನಲ್ಲಿ ಹಸೀನಾ ಜತೆ ಅಲ್ಲಿನ ಉನ್ನತ ಮಟ್ಟದ ಪ್ರಯಾಣಿಕರು ಇರುವುದನ್ನು ಭಾರತೀಯ ವಾಯುಪಡೆ ಅರಿತುಕೊಂಡಿತು. ನಂತರ ಪಶ್ಚಿಮ ಬಂಗಾಳದ ಹಸಿಮಾರಾ ಏರ್ಫೋರ್ಸ್ ಸ್ಟೇಷನ್ನಿಂದ ಎರಡು ರಫೇಲ್ ಯುದ್ಧ ವಿಮಾನಗಳು ಅವರಿಗೆ ಭದ್ರತೆ ನೀಡಲು ಹೊರಟಿವೆ.
ಅಲ್ಲಿಂದ ಹಸೀನಾರಿದ್ದ ವಿಮಾನವು ಭಾರತೀಯ ಯುದ್ಧ ವಿಮಾನಗಳ ಭದ್ರತೆಯೊಂದಿಗೆ ನಿಗದಿತ ಸ್ಥಳದತ್ತ ಹಾರಾಟ ನಡೆಸಿತ್ತು. ಈ ವೇಳೆ ಭಾರತೀಯ ಭದ್ರತಾ ಅಧಿಕಾರಿಗಳು, ಆಂತರಿಕ ಗುಪ್ತಚರ ಇಲಾಖೆಗಳು ಈ ಚಟುವಟಿಕೆಯ ಮೇಲೆ ಹದ್ದಿನ ಕಣ್ಣಿಟ್ಟು, ಸಲಹೆ ಸೂಚನೆಗಳನ್ನು ನೀಡುತ್ತಿದ್ದವು. ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ಜನರಲ್ ಉಪೇಂದ್ರ ದ್ವಿವೇದಿ ಕೂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಸಂಜೆ 5.45ರ ಸುಮಾರಿಗೆ ಹಿಂಡನ್ ಏರ್ಬೇಸ್ಥೆ ಹಸೀನಾರಿದ್ದ ವಿಮಾನ ಬಂದು ತಲುಪಿದೆ. ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಎನ್ಎಸ್ಎ ಮುಖ್ಯಸ್ಥ ಅಜಿತ್ ದೋವಲ್ ಉಪಸ್ಥಿತರಿದ್ದರು. ಅಲ್ಲಿ ಇಬ್ಬರ ನಡುವೆ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆದಿದೆ.
ಬಾಂಗ್ಲಾದ ಪ್ರಸ್ತತ ಪರಿಸ್ಥಿತಿ, ಮುಂದಾಗುವ ಅನಾಹುತಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಕೊನೆಗೆ ಈ ಎಲ್ಲಾ ವಿಚಾರಗಳನ್ನು ಪ್ರಧಾನಿ ಮೋದಿ ಅವರ ಸಂಪುಟಕ್ಕೆ ದೋವಲ್ ಮಾಹಿತಿ ನೀಡಿದ್ದಾರೆ.