ಮಂಗಳೂರು: ಮಂಗಳೂರು ಹೋಮ್‌ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಮಹತ್ವದ ತೀರ್ಪು ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷಮುಕ್ತರಾಗಿದ್ದಾರೆ.

ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಪತ್ರಕರ್ತ ನವೀನ್ ಸೂರಿಂಜೆ ಪ್ರಕರಣವನ್ನು ನ್ಯಾಯಾಲಯ ಈ ಹಿಂದೆಯೇ ಕೈಬಿಟ್ಟಿತ್ತು. ಇಂದು ಉಳಿದ 40 ಆರೋಪಿಗಳನ್ನು ಕೋರ್ಟ್ ದೋಷ ಮುಕ್ತಗೊಳಿಸಿದೆ. ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿದೆ.

2012ರ ಜುಲೈ 28 ರಂದು ಹಿಂದು ಸಂಘಟನೆಯ ಕಾರ್ಯಕರ್ತರು ಪಡೀಲ್ ಹೋಂ ಸ್ಟೇ ಮೇಲೆ ದಾಳಿ ಮಾಡಿದ್ದರು. ಯುವಕ ಯುವತಿಯರು ಹೋಂ ಸ್ಟೇಯಲ್ಲಿ ತಂಗಿದ್ದು, ಬರ್ತ್ ಡೇ ಪಾರ್ಟಿ ಮಾಡುತ್ತಿದ್ದಾಗ ಅವರ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ತೀವ್ರ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂತಿಮವಾಗಿ ಪೊಲೀಸರು 44 ಮಂದಿಯ ಮೇಲೆ ಆರೋಪ ಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಘಟನೆ ನಡೆದು ಸುದೀರ್ಘ 12 ವರ್ಷ ವಿಚಾರಣೆ ಬಳಿಕ ಮಂಗಳವಾರ ಅಂತಿಮ ತೀರ್ಪು ಹೊರಬಿದ್ದಿದೆ.