ಬೆಳಗಾವಿ: ನಾವಗೆ ಸಮೀಪದ ಸ್ನೇಹಮ್ ಕಂಪನಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.ಮಂಗಳವಾರ ರಾತ್ರಿ ಈ ಕಂಪನಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಈ ಬಗ್ಗೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಕಂಪನಿಯಲ್ಲಿ ರಾತ್ರಿ ಸುಮಾರಿಗೆ ಬೆಂಕಿ ಅನಾಹುತ ನಡೆದಿದ್ದು ಸಂಭವಿಸಿರುವ ಹಾನಿ ಬಗ್ಗೆ ಮಾಹಿತಿ ಲಭಿಸಿಲ್ಲ. ಆದರೆ, ತಕ್ಷಣ ಆಗಮಿಸಿರುವ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.
ಬೆಳಗಾವಿ: ನಾವಗೆ ಗ್ರಾಮದ ಸನಿಹದ ಟಿಕ್ಸ್ ಟೇಪ್ (ಅಂಟು) ತಯಾರಿಸುವ ಸ್ನೇಹಂ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಈ ದುರ್ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಬೆಳಗಾವಿ ತಾಲೂಕಿನ ಕವಳೆವಾಡಿಯ ಮಾರುತಿ ನಾರಾಯಣ ಕರವೇಕರ (32),
ಹಳೇ ಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35) ಮತ್ತು ರಾಝವಾಡಿಯ ರಂಜಿತ ದಶರಥ ಪಾಟೀಲ (39) ಎಂಬ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂವರ ಸ್ಥಿತಿ ಗಂಭೀರವಾಗಿದ್ದು, ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕೆಎಲ್ಇ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾರ್ಕಂಡೇಯ ನಗರದ ಯಲ್ಲಪ್ಪ (20) ಎಂಬ ಕಾರ್ಮಿಕ ಇನ್ನೂ ಕಾರ್ಖಾನೆ ಒಳಗೆ ಸಿಲುಕಿದ್ದಾರೆ ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾರೆ.
ಬೆಂಕಿ ಅವಘಡದ ಮಾಹಿತಿ ಕಾಳಿಚ್ಚಿನಂತೆ ಹರಡಿದ್ದು ಸುತ್ತಮುತ್ತಲಿನ ಅಪಾರ ಪ್ರಮಾಣದ ಜನ ಕಾರ್ಖಾನೆ ಇರುವ ಸ್ಥಳಕ್ಕೆ ಧಾವಿಸಿದ್ದಾರೆ.
ಸ್ನೇಹಂ ಹೆಸರಿನ ಈ ಕಾರ್ಖಾನೆಯಲ್ಲಿ ಮೂರು ಶಿಫ್ಟ್ಗಳಲ್ಲಿ ತಲಾ 74 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಅವಘಡ ಮಂಗಳವಾರ ರಾತ್ರಿ ಸುಮಾರು 8.30 ರ ಸುಮಾರಿಗೆ ಸಂಭವಿಸಿದೆ. ಕಾರ್ಖಾನೆ ಒಳಗೆ ಎಷ್ಟು ಜನರಿದ್ದಾರೆ ಹಾಗೂ ಎಷ್ಟು ಜನ ಹೊರಗೆ ಓಡಿ ಬಂದಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸದ್ಯಕ್ಕೆ ಏನೂ ಹೇಳಲು ಆಗುವುದಿಲ್ಲ ಎಂದು ಪೊಲೀಸರು ಸಹಾ ತಿಳಿಸಿದ್ದಾರೆ.
ಯುವಕನ ಸಂಬಂಧಿಕರು ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ್ದು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ತಮ್ಮ ಕುಟುಂಬದ ಸದಸ್ಯರನ್ನು ರಕ್ಷಿಸುವಂತೆ ಜನ ಮೊರೆ ಇಡುತ್ತಿರುವ ದೃಶ್ಯ ಕಂಡು ಬಂದಿದೆ. ಕೆಲವರು ಹೇಳುವ ಪ್ರಕಾರ ಹತ್ತಕ್ಕೂ ಹೆಚ್ಚು ಜನ ಕಾರ್ಖಾನೆ ಒಳಗೆ ಬೆಂಕಿಗೆ ಆಹುತಿಯಾದ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮಳೆ ಬಿಡುವು ಪಡೆದುಕೊಂಡಿತ್ತು. ಇದರಿಂದ ಬೆಂಕಿ ಮತ್ತಷ್ಟು ಪ್ರಖರ ರೂಪ ಪಡೆದುಕೊಂಡು ಅದರ ಜ್ವಾಲೆ ಎಲ್ಲಾ ಕಡೆ ಅತಿ ವೇಗದಿಂದ ಹರಡಿತ್ತು.