ಮೂಡುಬಿದಿರೆ : ವಕೀಲಿ ವೃತ್ತಿ ಮಾಡುವವರು ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಓದುವ ಹವ್ಯಾಸವನ್ನು ನಿರಂತರವಾಗಿ ಹೊಂದಿರಬೇಕು. ಹೊಸ ಹೊಸ ತಂತ್ರಜ್ಞಾನಗಳನ್ನು ಸಹಾ ಅರಿತುಕೊಳ್ಳಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಬೆಳುವಾಯಿ ಎಸ್. ಅಬ್ದುಲ್ ನಜೀರ್ ಕಿವಿಮಾತು ಹೇಳಿದರು.
ಶನಿವಾರ ಶಿರ್ತಾಡಿಯ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 5 ಕೋಟಿಗೂ ಹೆಚ್ಚು ವ್ಯಾಜ್ಯಗಳು ಬಾಕಿ ಉಳಿದಿವೆ. ಉತ್ತರ ಭಾರತದಲ್ಲಿ ಕ್ರಿಮಿನಲ್ ವ್ಯಾಜ್ಯಗಳು ಹೆಚ್ಚಾಗಿದ್ದು ದಕ್ಷಿಣ ಭಾರತದಲ್ಲಿ ಸಿವಿಲ್ ವ್ಯಾಜ್ಯಗಳು ಅಧಿಕವಾಗಿವೆ. ಪ್ರತಿಯೊಬ್ಬರು ಬಸವಣ್ಣನವರು ಹೇಳಿದ ಕಳಬೇಡ, ಕೊಲಬೇಡ, ಮುನಿಯಬೇಡ, ಇದಿರ ಹಳಿಯ ಬೇಡ ಇತ್ಯಾದಿ ಬೇಡಗಳನ್ನು ಶಿರಸಾ ವಹಿಸಿ ಅಂತರಂಗ ಬಹಿರಂಗಗಳಲ್ಲಿ ಅಳವಡಿಸಿಕೊಂಡರೆ ಎಲ್ಲಾ ರೀತಿಯ ವ್ಯಾಜ್ಯಗಳಿಂದ ಭಾರತದ ಜನರು ಮುಕ್ತರಾಗಲು ಸಾಧ್ಯವಿದೆ. ದೇಶದಲ್ಲಿರುವ ಗಂಡಿರಲಿ ಹೆಣ್ಣಿರಲಿ ಎಲ್ಲರಿಗೂ ಸರಿ ಸಮಾನವಾದ ಅವಕಾಶ ಕಾನೂನಿನಡಿಯಲ್ಲಿ ಇದೆ. ಅವಿಭಕ್ತ ಕುಟುಂಬ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದಲ್ಲಿ ಭಾರತೀಯ ಸಂಸ್ಕೃತಿ ಉಳಿದು ಬೆಳೆಯಲು ಹಾಗೂ ಕಾನೂನಾತ್ಮಕವಾಗಿ ಸಮರ್ಪಕವಾಗಿ ಜಾರಿಗೊಳ್ಳಲು ಸಾಧ್ಯವಿದೆ. ಪ್ರಪಂಚದ ಎಲ್ಲಾ ನೇತಾರರು ಕಾನೂನಿನ ಹಿನ್ನೆಲೆಯಿಂದಲೇ ಬಂದವರು. ಹೀಗಾಗಿ ವಿದ್ಯೆರಹಿತವಾದಂತಹ ಯಾವುದು ಈ ಪ್ರಪಂಚದಲ್ಲಿ ಅಭಿವೃದ್ಧಿಗೆ ದಾರಿ ಮಾಡುವುದಿಲ್ಲ. ಇಂದಿನ ಕೃತಕ ಬುದ್ಧಿಮತ್ತೆ, ಕಂಪ್ಯೂಟರ್‌ಗಳು, ಉಪಕರಣಗಳು, ಎಲ್ಲವೂ ಕಾನೂನಿಗೆ ಪೂರಕವಾದ ವಿಷಯಗಳನ್ನು, ಮಾಹಿತಿಗಳನ್ನು ನೀಡಿ ಉಪಕರಿಸುತ್ತಿವೆ. ಹೀಗಾಗಿ ನ್ಯಾಯಾಧೀಶರು ಸಮರ್ಪಕವಾಗಿ ನ್ಯಾಯವನ್ನು ನೀಡಲು ಅವೆಲ್ಲವೂ ಪೂರಕವಾಗಿವೆ. ನ್ಯಾಯವಾದಿ ಎಲ್ಲವನ್ನು ತಿಳಿದು ಅರ್ಥೈಸಿಕೊಂಡು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಹರಡುವುದಕ್ಕೆ ಸದಾ ಪ್ರಯತ್ನಿಸುತ್ತಿರಬೇಕು. ಅದಕ್ಕಾಗಿ ಹೆಚ್ಚಿನ ತಿಳಿವಳಿಕೆಯನ್ನು ಪಡೆಯಲು ಸದಾ ಜ್ಞಾನ ಪಿಪಾಸು ಆಗಿರಬೇಕು ಎಂದು ಅವರು ಹೇಳಿದರು.
ಕಾನೂನಿನ ಪಾಲನೆ ಎನ್ನುವುದು ನಮ್ಮ ಮನೆಯಿಂದಲೇ ಆರಂಭವಾಗಬೇಕು. ದೇಶದಲ್ಲಿ 5 ಕೋಟಿ ವ್ಯಾಜ್ಯಗಳು ಬಾಕಿ ಉಳಿದಿವೆ. 25 ಕೋಟಿ ಜನರ ಮೇಲೆ ಅವು ಪರಿಣಾಮ ಬೀರುತ್ತಿದ್ದು ಇದು ನ್ಯಾಯದಾನದ ವಿಳಂಬವನ್ನು ಸೂಚಿಸುತ್ತದೆ. ಸಿವಿಲ್ ವ್ಯಾಜ್ಯಗಳ ಬಗ್ಗೆ ತುಂಬಾ ಗಂಭೀರ ಚಿಂತನೆ ಅಗತ್ಯವಿದೆ. ಕಾನೂನಿನ ಮೂಲಕ ನ್ಯಾಯಕೋರಿ ಬರುವ ಸಂತ್ರಸ್ತರಿಗೆ ಸಮರ್ಪಕ ನ್ಯಾಯ ಸಿಗುವಂತಾಗಬೇಕು ಎಂದು ಅವರು ಸಲಹೆ ನೀಡಿದರು. ಕಾನೂನು ದೇಶ ಕಟ್ಟುವಲ್ಲಿ ಉತ್ತಮ ವ್ಯವಸ್ಥೆಯಾಗಿದೆ. ಪ್ರತಿಯೊಬ್ಬರೂ ಕಾನೂನು ತಿಳಿವಳಿಕೆಯನ್ನು ಹೊಂದುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ಜ್ಞಾನದಿಂದ ಜೀವನ ದರ್ಶನ ಸಾಧ್ಯವಿದೆ. ಜ್ಞಾನಕ್ಕೆ ಸಮನಾದ ಶಿಕ್ಷಣ ಇನ್ನೊಂದಿಲ್ಲ ಎನ್ನುತ್ತಾನೆ ಶ್ರೀ ಕೃಷ್ಣ ಪರಮಾತ್ಮ. ಜ್ಞಾನ ಬೆಳಕನ್ನು ಅರಸುವ ನಾಡು ಭಾರತ. ನಮ್ಮ ದೇಶದಲ್ಲಿ ಪ್ರಮುಖವಾಗಿ 24 ವಿಶ್ವವಿದ್ಯಾಲಯಗಳು ಪುರಾತನ ಕಾಲದಲ್ಲೇ ಇದ್ದಿದ್ದವು. ಸಂವಿಧಾನ ರಚನೆಯಲ್ಲಿ ನಮ್ಮ ಮಣ್ಣಿನ ಗುಣ ಅಡಕವಾಗಿದೆ. ಹೀಗಾಗಿ ನಮ್ಮ ಸಂವಿಧಾನ ಅತ್ಯಂತ ಸದೃಢವಾಗಿದೆ. ಈ ಮೂಲಕ ದೇಶವನ್ನು ಬಲಿಷ್ಢವಾಗಿ ಕಟ್ಟಲು ಅನುಕೂಲವಾಗಿದೆ ಎಂದು ಹೇಳಿದರು.
ಭಾರತ ಶಾಂತಿ ಮತ್ತು ಜ್ಞಾನಪ್ರಿಯ ರಾಷ್ಟ್ರ. ಮಹಮ್ಮದ್ ಇಕ್ಬಾಲ್ ಅವರು ತಮ್ಮ ಕಾವ್ಯದಲ್ಲಿ ಸಾರೆ ಜಹಾಂಸೆ ಅಚ್ಚ ಎಂದು ಹಾಡಿ ಕುಣಿದಿದ್ದಾರೆ. ಜ್ಞಾನ ಸಜೀವ ನದಿಯಾಗಿ ಈ ದೇಶದಲ್ಲಿ ಹರಿಯುತ್ತಿರುವುದರಿಂದ ಸಂವಿಧಾನದ ರಚನೆ ಸದೃಢವಾಗಿ ಜ್ಞಾನವೆತ್ತ ರೀತಿಯಲ್ಲಿ ಜ್ಞಾನಮಾರ್ಗದಲ್ಲಿ ಎಲ್ಲವನ್ನು ಈ ದೇಶದಲ್ಲಿ ನಡೆಸುತ್ತಿದೆ. ಕಾನೂನು ಮನೆಯಿಂದಲೇ ಪ್ರಾರಂಭವಾಗಬೇಕು. ಹಾಗಾದರೆ ಮಾತ್ರ ಎಲ್ಲವೂ ಸಮರ್ಪಕವಾಗಿ ನಡೆಯುವುದಕ್ಕೆ ಸಾಧ್ಯವಿದೆ. ಸಾಕ್ರಟೀಸ್ ಹೇಳಿದಂತೆ ಶಿಕ್ಷಣವನ್ನು ಅರಸಿಕೊಂಡು ಹೋಗು. ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿ ಅಭಿವೃದ್ಧಿ ಮಾಡಲು ಪ್ರಯತ್ನಿಸು ಎಂದು ತಿಳಿಸಿದಂತೆ ಪ್ರತಿಯೊಂದು ಹಳ್ಳಿಗಳಲ್ಲಿ ಕಾನೂನು ಶಿಕ್ಷಣ ಅಭಿವೃದ್ಧಿಯಾಗಿ ಪ್ರತಿಯೊಬ್ಬರು ಕಾನೂನು ಅರಿವು ಹೊಂದುವಂತಾಗಬೇಕು. ಕಾನೂನಿನ ತಿಳಿವಳಿಕೆ ಪಡೆದಾಗ ಜ್ಞಾನದ ಬೆಳಕು ಎಲ್ಲಡೆ ಪಸರಿಸುತ್ತದೆ ಎಂದರು.ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ಕಾಲೇಜಿನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಬಸವರಾಜು ಮಾತನಾಡಿ, ರಾಜ್ಯದಲ್ಲಿ 143 ಕಾನೂನು ಕಾಲೇಜುಗಳಿವೆ. ಕಾನೂನಿನ ಅವಶ್ಯಕತೆಗೆ ಸ್ಪಂದಿಸುತ್ತಿವೆ. ದೀನ ದಲಿತರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ನೆರವು ಸಿಗುವಂತಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.ಕಡಿಮೆ ಕಲಿಕೆ ಅನರ್ಥಕ್ಕೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಸಮಾಜದಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಸದೃಢ ಕಲಿಕೆ ಪ್ರತಿಯೊಬ್ಬರಿಗೂ ಅಗತ್ಯವಿದೆ. ಪ್ರತಿಯೊಬ್ಬ ನ್ಯಾಯವಾದಿ ತಾನಿರುವ ಪರಿಸರದ ಎಲ್ಲರನ್ನೂ, ಎಲ್ಲರಲ್ಲೂ ಕಾನೂನಿನ ತಿಳಿವಳಿಕೆಯನ್ನು ಮೂಡಿಸಿ ನಂಬಿಗಸ್ತನಾಗಿದ್ದು ಹೃದಯ ಶ್ರೀಮಂತಿಕೆಯಿಂದ ಎಲ್ಲರನ್ನು, ಬೆಳೆಸುವ ಪ್ರತಿಜ್ಞೆ ಮಾಡಿದರೆ ಇಡೀ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯವಿದೆ. ಬಡವ-ಬಲ್ಲಿದ, ಮೇಲು-ಕೀಳು ಎಂಬ ಎಲ್ಲಾ ರೀತಿಯ ಭೇದ ಭಾವಗಳು ದೂರವಾಗಿ ಹಳ್ಳಿಹಳ್ಳಿಗಳಲ್ಲಿ ಪ್ರತಿ ಗ್ರಾಮ ಗ್ರಾಮಗಳಲ್ಲಿ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ಧಿಯಾಗುವುದಕ್ಕೆ ಸಾಧ್ಯವಾಗುತ್ತದೆ. ಈ ಕೆಲಸ ಮಾಡಬೇಕಾದವರು ಸ್ವತಃ ನ್ಯಾಯವಾದಿಗಳು. ಸಹೋದರತೆಯಿಂದ ಎಲ್ಲರನ್ನು ಕಂಡು ಸಮಸ್ಯೆಗಳನ್ನು ತಾವೇ ಬಗೆಹರಿಸುವ ಪ್ರಯತ್ನಕ್ಕೆ ಇಳಿಯಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ವಿಶಾಲ ರಘು
ಮಾತನಾಡಿ, ಐವರು ವಿದ್ಯಾವಂತರು ಸೇರಿ ಕಟ್ಟಿದ ಈ ಭುವನ ಜ್ಯೋತಿ ಕಾನೂನು ಮಹಾವಿದ್ಯಾಲಯ ಭವಿಷ್ಯದಲ್ಲಿ ಶ್ರೇಷ್ಠ ಮಹಾವಿದ್ಯಾಲಯವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು. ಭುವನಕ್ಕೆ ಜ್ಯೋತಿಯಾಗಿ ಬೆಳಗುವ ಕಾನೂನು ವಿದ್ಯಾಲಯವನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿ ಮುಂದುವರಿಯುತ್ತಿರುವುದು ಬಹಳ ಉತ್ತಮ ಬೆಳವಣಿಗೆ. ಶಿರ, ಹಸ್ತ, ಹೃದಯಗಳನ್ನು ಸೇರಿ ವಿದ್ಯೆ ಮುಂದುವರಿದರೆ ಅಭಿವೃದ್ಧಿ ಶತಸಿದ್ಧ ಎಂದು ಇವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಜೋಶಿ ಅವರು ಶುಭ ಹಾರೈಸಿ ಮಾತನಾಡಿ, ನ್ಯಾಯವಾದಿಗಳು ಎಲ್ಲವನ್ನು ಅರ್ಥೈಸಿಕೊಂಡು ಬೆಳವಣಿಗೆ ಆದಲ್ಲಿ ಮಾತ್ರ ಕಾನೂನು ಉತ್ತಮ ರೀತಿಯಲ್ಲಿ ಜಾರಿಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು
ಭುವನ ಜ್ಯೋತಿ ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ಪ್ರಭು, ಖಜಾಂಚಿ ಲತಾ, ಶರಣಪ್ಪ ಬಾವಿ, ಸದಸ್ಯರಾದ ಸುಬ್ರಮಣ್ಯ ಕುಮಾರ್, ಕೆ ತಿರುಮಲೇಶ್ವರ್ ಭಟ್, ಪವನ್ ಕುಮಾರ್, ಮಯೂರ ಕೀರ್ತಿ, ಸೋಮನಾಥ ಹೆಗ್ಡೆ ಉಪಸ್ಥಿತರಿದ್ದರು. ಪ್ರಾಚಾರ್ಯ ಪ್ರಶಾಂತ ಎಂ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಧ್ಯೇಯ ಹಾಗೂ ಉದ್ದೇಶಗಳನ್ನು ವಿವರಿಸಿದರು. ಕಾರ್ಯದರ್ಶಿ ಪ್ರಶಾಂತ ಡಿಸೋಜಾ ಸ್ವಾಗತಿಸಿದರು. ಸಂಚಾಲಕ ಪ್ರಶಾಂತ ಎಸ್. ವಂದಿಸಿದರು ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು.