ಬೆಳಗಾವಿ: ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸದ್ಗುಣಗಳನ್ನು, ಸಜ್ಜನ ಪ್ರಜೆಗಳನ್ನು ನಿರ್ಮಾಣ ಮಾಡಬೇಕು, ಈ ನಿಟ್ಟಿನಲ್ಲಿ ನ್ಯಾಯವಾದಿಗಳು ಶ್ರದ್ಧೆ, ನಿಷ್ಠೆ, ಬದ್ಧತೆ, ಸಾಮಾಜಿಕ ಕಳಕಳಿಯ ಗುಣಗಳನ್ನು ಹೊಂದಿರಬೇಕು. ಈ ಎಲ್ಲಾ ಗುಣಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಹೇಳಿದರು.
ಶನಿವಾರ ನಗರದ ಕೆ ಎಲ್ ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟು ಓದಬೇಕು. ಸುಖದ ನಿರೀಕ್ಷೆ ಬಿಟ್ಟು ಸಾಧನೆಗೈದು ಸಮಾಜಕ್ಕೆ ಕೊಡುಗೆ ಕೊಟ್ಟಾಗಲೇ ಮಾನವ ಜನ್ಮ ಪರಿಪೂರ್ಣವಾಗುವುದು. ಇಂದಿನ ದಿನಗಳಲ್ಲಿ ಮಕ್ಕಳು ನಮ್ಮ ಸಾಂಸ್ಕೃತಿಕ, ಸಾಮಾಜಿಕ ಗುಣಗಳನ್ನು ಮೈಗುಡಿಸಿಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ. ಬೆಲ್ಲದ ಮಾತನಾಡಿ, ಬೆಲ್ಲದ ಕಾಲೇಜು ವಿದ್ಯಾರ್ಥಿಗಳಿಗೆ ಪೂರಕವಾದ ಎಲ್ಲಾ ವಾತಾವರಣವನ್ನು ಒದಗಿಸಿ ಕೊಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ನ್ಯಾಯವಾದಿಗಳಾಗಿ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಬಿಎಎಲ್‌ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ಸುನಂದಾ ಪಾಟೀಲ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ.ಜ್ಯೋತಿ ಹಿರೇಮಠ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಉಮಾದೇವಿ ಹಿರೇಮಠ ವಾರ್ಷಿಕ ವರದಿ ವಾಚಿಸಿದರು. ವಿನಯ ಪೂಜಾರ ವಂದಿಸಿದರು. ಪ್ರೇರಣಾ ಹನಮಶೇಟ್ ನಿರೂಪಿಸಿದರು.