ಬೆಳಗಾವಿ : ಬೆಳಗಾವಿ, ಕಿತ್ತೂರು ಹಾಗೂ ಹುಬ್ಬಳ್ಳಿ-ಧಾರವಾಡ ನಡುವೆ ಅತ್ಯಂತ ಮಹತ್ವಾಕಾಂಕ್ಷಿ ಹೊಸ ರೈಲು ಮಾರ್ಗ ಕುಂಟುತ್ತಾ ಸಾಗಿದೆ. ಸುರೇಶ ಅಂಗಡಿ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಅವಧಿಯಲ್ಲಿ ಯೋಜನೆಗೆ ಚುರುಕು ಹಾಗೂ ವೇಗ ಸಿಕ್ಕಿತ್ತು. ಆದರೆ, ಈಗ ಮೂರು ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಇದೀಗ ಬೆಳಗಾವಿ ಹಾಗೂ ಉತ್ತರ ಕನ್ನಡ ಲೋಕಸಭಾ ಸದಸ್ಯರಾಗಿರುವ ಜಗದೀಶ ಶೆಟ್ಟರ್ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಯೋಜನೆಯನ್ನು ಆದಷ್ಟು ಬೇಗನೇ ಕಾರ್ಯರೂಪಕ್ಕೆ ತರಲು ಪ್ರಯತ್ನಪಡುತ್ತಿದ್ದಾರೆ. ಅದರಲ್ಲಿ ಕೇಂದ್ರ ಸಚಿವರ ಬೆನ್ನು ಬಿದ್ದಿದ್ದಾರೆ. ಈ ಬಗ್ಗೆ ಆಗಾಗ ಲೋಕಸಭೆಯಲ್ಲೂ ಯೋಜನೆ ಬಗ್ಗೆ ಪ್ರಶ್ನಿಸಿ ಯೋಜನೆಯ ಸ್ಥಿತಿಗತಿ ವಿಚಾರಿಸುತ್ತಿದ್ದಾರೆ.

ಬೆಳಗಾವಿ-ಧಾರವಾಡ ರೈಲು ಮಾರ್ಗದ ಅಭಿವೃದ್ಧಿಗಾಗಿ ಅಗತ್ಯವಿರುವ ಜಮೀನನ್ನು ಕರ್ನಾಟಕ ಸರ್ಕಾರ ರೈಲ್ವೆಗೆ ಹಸ್ತಾಂತರಿಸಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಬೆಳಗಾವಿಯಿಂದ ಧಾರವಾಡವರೆಗೆ 73 ಕಿ.ಮೀ. ಉದ್ದದ ರೈಲು ಮಾರ್ಗವನ್ನು 50:50 ಪಾಲುದಾರಿಕೆಯಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಯೋಜನಾ ವೆಚ್ಚದಲ್ಲಿ ತಲಾ ಶೇ 50 ಭರಿಸಬೇಕು. ಇದಕ್ಕೆ ಅಗತ್ಯವಿರುವ ಜಮೀನಿನನ್ನು ಕರ್ನಾಟಕ ಸರ್ಕಾರ ಉಚಿತವಾಗಿ ನೀಡಬೇಕಿದೆ ಎಂದು ಅವರು ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆ ಕೇಳಿದ್ದರು.

ಯೋಜನೆಗೆ ಅಗತ್ಯವಿರುವ ಭೂಮಿಯ ಸ್ವಾಧೀನಪಡಿಸಿಕೊಳ್ಳುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಕೆಐಎಡಿಬಿಗೆ ವಹಿಸಿದೆ. 888 ಎಕರೆ ಒದಗಿಸುವಂತೆ ಕೆಐಎಡಿಬಿಗೆ ಬೇಡಿಕೆಯನ್ನೂ ಸಲ್ಲಿಸಲಾಗಿದೆ ಎಂದು ಸಚಿವ ವೈಷ್ಣವ್ ವಿವರಿಸಿದ್ದಾರೆ.

ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ಹೊಸ ರೈಲು ಮಾರ್ಗ ಕುರಿತ ಪ್ರಶ್ನೆಗೆ, 158 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಸಂಬಂಧಿಸಿ ಅಂತಿಮ ಸರ್ವೆ ಹಾಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಮಂಜೂರಾತಿ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.