ಬೆಳಗಾವಿ : ಗ್ರಂಥಾಲಯಗಳು ಅಂಗೈಯಲ್ಲಿನ ಜ್ಞಾನ ಭಂಡಾರ. ಗ್ರಂಥಗಳು ಜಗತ್ತಿನ ಜ್ಞಾನ ಭಂಡಾರದ ಕೀಲಿಕೈ. ಉತ್ತಮ ವ್ಯಕ್ತಿತ್ವ ಮತ್ತು ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯದ ಪಾತ್ರ ಪ್ರಧಾನವಾದುದು ಎಂದು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಎಂ. ಜಿ. ಹೆಗಡೆ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್. ಆರ್. ರಂಗನಾಥ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಗ್ರಂಥಗಳು ವಿಶ್ವದ ಜ್ಞಾನವನ್ನು ಉಣ ಬಡಿಸುತ್ತವೆ. ಆದರೆ ,ಇಂದಿನ ಸಾಮಾಜಿಕ ಜಾಲತಾಣಗಳು ಓದುವ ವರ್ಗವನ್ನು ಕಡಿಮೆ ಮಾಡಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಂಥಾಲಯಗಳು ಎಲ್ಲರಿಗೂ ತಲುಪುವ ಕಾರ್ಯ ಮಾಡಬೇಕು ಎಂದರು.

ಗ್ರಂಥಾಲಯದ ಉಪಗ್ರಂಥಪಾಲಕಿ ಡಾ. ಭವಾನಿ ಶಂಕರ ಅವರು ಗ್ರಂಥಾಲಯದ ಚಾರಿತ್ರಿಕ ಹಿನ್ನೆಲೆ, ಅದರ ಬೆಳವಣಿಗೆ ಹಾಗೂ ಡಾ. ಎಸ್. ಆರ್. ರಂಗನಾಥ ಅವರ ಬದುಕು -ಬರಹದ ಕುರಿತು ಮಾತನಾಡಿದರು.

ಗ್ರಂಥಾಲಯ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಂಥಾಲಯದ ಪಾತ್ರ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಗ್ರಂಥಾಲಯ ಸಿಬ್ಬಂದಿಗಳಾದ ರಶ್ಮೀ ಪಾಟೀಲ್ ನಿರೂಪಿಸಿದರು. ಶಿವಾನಂದ ಬೊಮ್ಮಣ್ಣವರ ಸ್ವಾಗತಿಸಿದರು. ಭಾಗ್ಯಶ್ರೀ ಕುಲಕರ್ಣಿ ವಂದಿಸಿದರು. ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.