ಬೆಳಗಾವಿ: ಸವದತ್ತಿ ತಾಲೂಕು ಬೆನಕಟ್ಟಿ ಗ್ರಾಮದಲ್ಲಿ ಕಾಡಪ್ಪ 42 ಎನ್ನುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟ ಕೆಲ ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಕೊಲೆಗೈಯಲು ಕಾರಣ ಏನು ಗೊತ್ತೆ ?
ಪಾರ್ಟಿ ಮಾಡೋಣ ಬಾ ಎಂದು ಕಾಡಪ್ಪ ಅವರನ್ನು ಕರೆದಿದ್ದಾರೆ. ಈತ ಪಾರ್ಟಿಗೆ ಹೋಗಿದ್ದಾನೆ. ಕುಡಿದು ನಶೆಯಲ್ಲಿದ್ದಾಗ ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಪಾತಕಿಗಳು ಕೊನೆಗೂ ಈಗ ಕಂಬಿ ಎಣಿಸುತ್ತಿದ್ದಾರೆ.
ನಾಗಪ್ಪ ರೈನಾಪುರ ಎಂಬಾತ ಕಾಡಪ್ಪ ಅವರನ್ನು ಕೊಲ್ಲಲು ಸುಪಾರಿ ಕೊಟ್ಟವ. ಸುಮಾರು 2.5 ಲಕ್ಷ ನೀಡಿ ಕೊಲೆಗೈಯ್ಯಲು ಯೋಜಿತ ಪ್ಲಾನ್ ಮಾಡಿದ್ದ. ಕೊಲೆಯಾದ ಕಾಡಪ್ಪನ ಪತ್ನಿಯ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಂಡಿದ್ದ ನಾಗಪ್ಪ ಹೇಗಾದರೂ ಮಾಡಿ ಕಾಡಪ್ಪನನ್ನು ಕೊಲೆ ಮಾಡಲೇಬೇಕು ಎಂದು ಪಣತೊಟ್ಟಿದ್ದ.
ಪೊಲೀಸರು ಈ ಕೊಲೆಯ ಬೆನ್ನು ಹತ್ತಿ ಹೋದಾಗ ಪ್ರಕರಣದ ಬಗ್ಗೆ ಭಯಾನಕ ಸುಳಿವು ದೊರೆತಿದೆ. ನಾಗಪ್ಪ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪೆಟ್ರೋಲ್ ಪಂಪ್ ನಲ್ಲಿ ನಾಗಪ್ಪನ ಚಲನವಲನವೂ ಸೆರೆಯಾಗಿದೆ. ತಾನು ಸುಪಾರಿ ಕೊಟ್ಟ ಆರೋಪಿ ಲಕ್ಷ್ಮಣ್ ಜೊತೆ ನಾಗಪ್ಪ ಕೊನೆಯದಾಗಿ ಕಾಣಿಸಿಕೊಂಡಿದ್ದ. ಮೊದಲು ಲಕ್ಷ್ಮಣನನ್ನು ಬಂಧಿಸಿರುವ ಪೊಲೀಸರು ಸಂಪೂರ್ಣ ವಿಚಾರಣೆ ಮಾಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ವಿಠಲ, ಲಕ್ಷ್ಮಣ ಎಂಬುವವರನ್ನು ಸದ್ಯ ಬಂಧಿಸಿದ್ದು ಇವರು ಸೇರಿ ಒಟ್ಟು ಐವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಸವರಾಜ, ಶಿವಾನಂದ, ನಾಗಪ್ಪ ಅವರ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಎಸ್ಪಿ ಡಾ. ಭೀಮಶಂಕರ ಗುಳೇದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.