ಬೆಳಗಾವಿ : ಈಗ ಪದವಿಯನ್ನು ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ನಿಮ್ಮ ಜಾತಿ , ಕುಲ ಗೋತ್ರಗಳು ಬಿಟ್ಟು ಬದುಕಿನ ಔನ್ನತ್ಯವನ್ನು ಕಂಡುಕೊಳ್ಳಿ. ಇದೆಲ್ಲದರ ಮಧ್ಯೆ ಸಮಾಜವನ್ನು ಗಮನಿಸುತ್ತಿರುವ ಯುವಕರಲ್ಲಿ ನಿಜವಾದ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯೇ ಎಂಬುದು ಪ್ರಶ್ನೆಯೇಳುತ್ತಿದೆ ಎಂದು ಸಾಹಿತಿ ಡಾ. ವಿನಯಾ ಒಕ್ಕುಂದ ಕಳವಳ ವ್ಯಕ್ತಪಡಿಸಿದರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್., ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಮಾತನಾಡಿ, ಅನ್ನಕ್ಕಿಂತ ಸ್ವಾತಂತ್ರ್ಯ ದೊಡ್ಡದು. ಭೌತಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕಿದೆ. ವಿದ್ಯಾರ್ಥಿಗಳು ಜ್ಞಾನವನ್ನು ಉಪಾಸನೆ ಮಾಡಬೇಕು. ಅಕ್ಷರದ ಶಕ್ತಿಯನ್ನು ಅರಿತಿರುವರು ಮಾತ್ರ ತಮ್ಮ ಬದುಕನ್ನು ತಾವೇ ನಿರ್ಮಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಶಿಕ್ಷಣ, ಕೌಶಲ್ಯ, ಉದ್ಯೋಗ ಮತ್ತು ಜ್ಞಾನವನ್ನುಳ್ಳ ಸಮಗ್ರ ಮಾಹಿತಿಯುಳ್ಳ ಯಾಪ್ ಒಂದನ್ನು ಶೀಘ್ರದಲ್ಲೇ ತರುತ್ತಿದ್ದೇವೆ ಎಂದರು.

ಸ್ವಾತಂತ್ರ್ಯದ ನಿಜವಾದ ಅರ್ಥ ಮತ್ತು ತ್ಯಾಗ ಮಾಡಿ ಇತಿಹಾಸದ ಪುಟದಲ್ಲಿ ಕಾಣೆಯಾದವರನ್ನು ನೆನಪಿಸಿಕೊಳ್ಳುವ ಕೆಲಸ ಆಗಬೇಕು. ನಾವು ಓದುವ ಸ್ವಾತಂತ್ರ್ಯ ಹೋರಾಟದ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯಿದೆ. ಅದು ಎರಡು, ಮೂರನೇ ಸಾಲಿನಲ್ಲಿ ನಿಂತು ಹೋರಾಡಿದ ಮಹನೀಯರ ಚರಿತ್ರೆಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ರಾಣಿಯರು ಸುದೀರ್ಘ ಕಾಲ ರಾಜ್ಯವಾಳಿದರು. ನಾಡು, ನುಡಿಯ ರಕ್ಷಣೆಗಾಗಿ ಬದುಕನ್ನು ಮುಡಿಪಾಗಿಟ್ಟರು. ಅವರ ಕುರಿತು ನಮ್ಮ ಇತಿಹಾಸದ ಪಠ್ಯಗಳಲ್ಲಿ ಒಂದೆರಡು ಟಿಪ್ಪಣಿಗಳಿಗೆ ಮೀಸಲಿಟ್ಟರು. ಇವುಗಳ ಕುರಿತು ಮೊದಲಿನಿಂದಲೂ ನಾವು ನಿರ್ಲಕ್ಷ್ಯ ವಹಿಸುತ್ತ ಬಂದಿದ್ದೇವೆ. ಇಂದಿನ ಶಿಕ್ಷಣ ವ್ಯವಸ್ಥೆ ನೋಡಿದರೆ ಭಯಾನಕ ಸ್ಥಿತಿಯಲ್ಲಿದೆ. ಡಿಜಿಟಲ್ ತಂತ್ರಜ್ಞಾನ ನಮ್ಮನ್ನು ಆಳುತ್ತಿದೆ. ಸ್ವಂತ ಬುದ್ಧಿಯನ್ನು ಉಪಯೋಗಿಸದೇ ಕೇವಲ ಕಟ್ ಮತ್ತು ಪೇಸ್ಟ್ ಮಾಡುತ್ತಿದ್ದೇವೆ. ಇದು ದೊಡ್ಡ ದುರಂತವೆಂದರು. ನಮ್ಮ ಹೊಟ್ಟೆಯಲ್ಲಿ ಹುಟ್ಟಿ, ನಮ್ಮ ಮೊಲೆ ಹಾಲು ಕುಡಿದು, ನಮ್ಮಿಂದಲೇ ಶಿಕ್ಷಣ ಪಡೆದು ಮುಂದೆ ಅತ್ಯಾಚಾರಿ ಆಗುವುದು ನಮ್ಮ ದುರಂತವೆಂದು ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಅತ್ಯಾಚಾರದ ಕುರಿತು ನೋವನ್ನು ವ್ಯಕ್ತಪಡಿಸಿದರು. ಯುವ ಜನರು ಹೆಚ್ಚಿರುವ ಭಾರತವು ಜಡ ಭಾರತದತ್ತ ವಾಲುತ್ತಿದೆ ಎಂದರು.

ವಿದ್ಯಾರ್ಥಿಗಳು ಎದುರಾಗುವ ಕ್ಷುಲ್ಲಕ ಕಾರಣಗಳು ಸಣ್ಣಪುಟ್ಟ ಸಮಸ್ಯೆಗಳಿಗೆ ಸೋತು ಜೀವನಕ್ಕೆ ವಿಮುಖರಾಗುತ್ತಿದ್ದಾರೆ. ಅದೆಲ್ಲವನ್ನು ದಾಟಿದರೆ ಭವ್ಯ ಬದುಕಿದೆ ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರ್ಥಮಾಡಿಕೊಳ್ಳಬೇಕು. ಸಂಗೀತ, ಸಾಹಿತ್ಯ, ಕಲೆಗಳಿಗೆ ನಮ್ಮ ಮಹಾವಿದ್ಯಾಲಯ ಇನ್ನು ಮುಂದೆ ಹೆಚ್ಚು ಗಮನ ಕೊಡುತ್ತದೆ. ಅದರಿಂದಲೇ ವಿದ್ಯಾರ್ಥಿಗಳ ಬದುಕು ಬದಲಾಯಿಸುತ್ತೇವೆ ಎಂದರು.

ಕುಲಸಚಿವೆ ಎಂ. ಎ. ಸಪ್ನಾ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಗಜಾನನ ಗೋವಿಂದಪ್ಪಗೋಳ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿ ಪ್ರಿಯಾಂಕಾ ತೆಲಗಾರ ಪ್ರಾರ್ಥಿಸಿದರು. ಶಿವಕುಮಾರ್ ಹಿರೇಮಠ ಸ್ವಾಗತಿಸಿದರು. ಸಮರ್ಥ ಹಿರೇಕೊಡಿ ಪರಿಚಯಿಸಿದರು. ಅಭಿಲಾಷಾ ಬಡ್ತಿ ವಂದಿಸಿದರು. ಮೀರಾ ನದಾಫ್ ಹಾಗೂ ಶಾಂಭವಿ ಥೊರಲಿ ನಿರೂಪಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು