ಬೆಳಗಾವಿ : ಕನ್ನಡ, ಕನ್ನಡತ್ವಕ್ಕೆ ಗಡಿನಾಡಿನಲ್ಲಿ ಸೂಕ್ತವಾದ ವಾತಾವರಣ ನಿರ್ಮಾಣವಾಗಬೇಕು. ಕನ್ನಡದ ಬೇರುಗಳು ಇಲ್ಲಿ ಭದ್ರವಾದಷ್ಟು ಗಡಿನಾಡಿನಲ್ಲಿ ಕನ್ನಡದ ಸಂಸ್ಕೃತಿ ಸುಭದ್ರವಾಗುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಅಭಿಪ್ರಾಯಪಟ್ಟರು.

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ಬಳಗದವರು ಹಮ್ಮಿಕೊಂಡ ಕನ್ನಡ ಪರ್ವ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಗಡಿಭಾಗದಲ್ಲಿ ಇರುವ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಸದಾ ಜಾಗೃತವಾಗಿರಬೇಕು. ವಿದ್ಯಾರ್ಥಿ ದೆಸೆಯಲ್ಲಿ ತೋರಿಸುವ ಕನ್ನಡಾಭಿಮಾನ ನಿಮ್ಮ ಮುಂದಿನ ಉದ್ಯೋಗದಲ್ಲಿಯೂ ಪ್ರದರ್ಶಿಸಬೇಕು. ಆಗ ಕನ್ನಡದ ನಿಜವಾದ ವಾತಾವರಣ ಸೃಷ್ಟಿಯಾಗುತ್ತದೆ. ನೀವು ಎಲ್ಲೇ ಇದ್ದರೂ ಅಲ್ಲೊಂದಿಷ್ಟು ಕನ್ನಡಕ್ಕೆ ಜಾಗ ನೀಡಿ. ಬೆಳಗಾವಿಯಲ್ಲಿ ಒಂದು ಕಾಲದಲ್ಲಿ ಕನ್ನಡದ ಚಿತ್ರಗಳು ಪ್ರದರ್ಶನವಾಗುವುದೇ ಕಷ್ಟವಾಗುತಿತ್ತು. ಅಂಥ ಸಂದರ್ಭದಲ್ಲಿ ಕನ್ನಡದ ಹೋರಾಟಗಾರರು ಚಲನ ಚಿತ್ರದ ಮಂದಿರದ ಮುಂದೆ ಪ್ರತಿಭಟನೆ ಮಾಡಿದ್ದರು. ಆ ಮೂಲಕ ಕನ್ನಡ ಚಿತ್ರ, ಸಂಸ್ಕೃತಿಯ ಅನಾವರಣಕ್ಕೆ ವೇದಿಕೆಯನ್ನು ನಿರ್ಮಾಣ ಮಾಡಿದರು. ಗೋಕಾಕ ಚಳವಳಿಯಲ್ಲಿಯೂ ಕನ್ನಡಕ್ಕೆ ಅನ್ಯಾಯವಾಗದಂತೆ ನೋಡಿಕೊಂಡರು. ಬೆಳಗಾವಿ ಕುರಿತು ಸುಪ್ರೀಂ ಕೋರ್ಟಿನಲ್ಲಿ ದಾವೆ ಇದೆ. ಅದಕ್ಕೆ ಪೂರಕವಾದ ದಾಖಲೆಗಳು ಒದಗಿಸುವಂತೆ ಮತ್ತು ಸಮರ್ಥವಾಗಿ ವಾದ ಮಂಡಿಸುವಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕು. ನಮ್ಮಂಥ ಕನ್ನಡ ಹೋರಾಟಗಾರರು ಅದರ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದೇವೆ. ಬೆಳಗಾವಿ ಕರ್ನಾಟಕದು ಎಂಬುದಕ್ಕೆ ಸಾಕಷ್ಟು ಪುರಾತನ ದಾಖಲೆಗಳಿವೆ.

ಅಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದರು. ಸಮಕಾಲೀನ ಕನ್ನಡ ವಿದ್ಯಮಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರ್ಜುನ ಜಂಬಗಿ ಅವರು ಇತ್ತೀಚಿನ ಕನ್ನಡ ಚಲನಚಿತ್ರಗಳು ಕನ್ನಡ ಭಾಷೆ, ಸಂಸ್ಕೃತಿಯನ್ನು ನಾಡಿನಾಚೆಗೂ ತೆಗೆದುಕೊಂಡು ಹೋಗಿವೆ. ಅದರಿಂದಾಗಿ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಮತ್ತು ವಿಶಾಲತೆಯನ್ನು ವೃದ್ಧಿಸಿಕೊಳ್ಳುತ್ತಿದೆ. ಕನ್ನಡ ಭಾಷೆ ತುಂಬಾ ವೈಜ್ಞಾನಿಕವಾದ ಭಾಷೆ . ಇದು ಸಾಹಿತ್ಯ ಸಂಸ್ಕೃತಿ, ಕಲೆಗಳಿಂದ ಶ್ರೀಮಂತವಾಗಿದೆ. ನಮ್ಮಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿ ವರ್ಷವೂ ಕನ್ನಡ ಹಬ್ಬವನ್ನು ಸ್ವಯಂಪ್ರೇರಿತರಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಇದರಿಂದಾಗಿ ಮಹಾವಿದ್ಯಾಲಯದಲ್ಲಿ ಕನ್ನಡದ ವಾತಾವರಣ ಗಟ್ಟಿಯಾಗುತ್ತಿದೆ ಎಂದರು.

ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಹೇಶ ಗಾಜಪ್ಪನರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಬಳಗದ ಪದಾಧಿಕಾರಿಗಳಾದ ವಿದ್ಯಾರ್ಥಿನಿ ತನುಜಾ ಕಡಕೋಳ್ ಹಾಗೂ ವಿದ್ಯಾರ್ಥಿ ಸಮ್ಮೇದ್ ಗಾಡೇಕರ ಉಪಸ್ಥಿತರಿದ್ದರು.

ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚನ್ನಮ್ಮ, ತಾಯಿ ಭುವನೇಶ್ವರಿ ಮೂರ್ತಿಯನ್ನು ಹೊತ್ತುಕೊಂಡ ಅಲಂಕೃತ ರೂಪಕವಾಹನವು ಮಹಾವಿದ್ಯಾಲಯದಿಂದ ಚಾಲನೆಗೊಂಡು ಮಹಾವಿದ್ಯಾಲಯದಿಂದ ಮಾಳಮಾರುತಿ ಮಾರ್ಗವಾಗಿ ಸಾಗಿ ಶ್ರೀನಗರ ಗಾರ್ಡನ್ ವೃತ್ತವನ್ನು ಸುತ್ತುವರಿದು ಪುನಃ
ಮಹಾವಿದ್ಯಾಲಯಕ್ಕೆ ಬಂದು ಮುಕ್ತಾಯವಾಯಿತು. ವಿದ್ಯಾರ್ಥಿಗಳಿಂದ ಕನ್ನಡ ಭಾಷೆ, ಕವಿ, ಸಂಸ್ಕೃತಿಯ ಕುರಿತು ಮೆರವಣಿಗೆಯಲ್ಲಿ ಘೋಷಣೆಗಳು ಮೊಳಗಿದವು. ಒಂದೂವರೆ ಸಾವಿರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಭಾಗಿಯಾದರು.

ವಿದ್ಯಾರ್ಥಿ ಚೇತನ್ ನಂದಿಹಳ್ಳಿ ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ಶಾಂಭವಿ ಥೋರಲಿ ಪ್ರಾರ್ಥಿಸಿದರು, ಪ್ರೀತಿ ಬಡಿಗೇರ ಪರಿಚಯಿಸಿದರು. ಅಮೃತಾ ದೊಡ್ಡಲಕ್ಕನ್ನವರ ವಂದಿಸಿದರು, ವಿಜಯಲಕ್ಷ್ಮಿ ಹಡಪದ ನಿರೂಪಿಸಿದರು.