ನವದೆಹಲಿ: ಕೋಲ್ಕತಾ ನಗರದ ಆರ್.ಜಿ. ಕರ್ ಸರಕಾರಿ ವೈದ್ಯಕೀಯ ಹಾಗೂ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಶನಿವಾರ (ಆಗಸ್ಟ್ 17) ದೇಶಾದ್ಯಂತ ವೈದ್ಯರು ಸೇವೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಶನಿವಾರ (ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ಮರುದಿನ ಭಾನುವಾರ ಬೆಳಗ್ಗೆ 6 ಗಂಟೆ ವರೆಗೆ 24 ತಾಸುಗಳ ಕಾಲ ತುರ್ತು ಚಿಕಿತ್ಸೆ ಹೊರತು ಪಡಿಸಿ ಮತ್ಯಾವುದೇ ರೀತಿಯ ಚಿಕಿತ್ಸೆಗಳು ಲಭ್ಯ ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆ ನಡೆದ ಮೊದಲ ದಿನದಿಂದಲೂ ಕಾಲೇಜು ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಜೊತೆಗೆ ಪೋಲೀಸ್ ತನಿಖೆಯೂ ಸರಿಯಾದ ರೀತಿಯಲ್ಲಿ ಸಾಗುತ್ತಿಲ್ಲ ಎಂದು ಐಎಂಎ ದೂರಿದೆ.
ಈ ವೃತ್ತಿಯ ಕಾರಣದಿಂದಾಗಿಯೇ ವೈದ್ಯರು ಅದರಲ್ಲೂ ಮಹಿಳಾ ವೈದ್ಯರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಆಸ್ಪತ್ರೆ ಮತ್ತು ಕಾಲೇಜು ಆವರಣದೊಳಗೆ ಸಂಬಂಧಪಟ್ಟವರು ವೈದ್ಯರಿಗೆ ಭದ್ರತೆ ಕೊಡಬೇಕು. ವೈದ್ಯರು, ನರ್ಸ್ ಗಳು ಮತ್ತು ಇತರ ಆರೋಗ್ಯ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ಮತ್ತು ಮತ್ತಿತರ ಹಿಂಸೆ ಐಎಂಎ ವಿರೋಧಿಸುತ್ತದೆ ಎಂದು ತಿಳಿಸಿದೆ.ಆಗಸ್ಟ್ 17ರಂದು ವೈದ್ಯರು ಮುಷ್ಕರ ನಡೆಸಲಿದ್ದಾರೆ. ಎಲ್ಲಾ ಅಗತ್ಯ ಸೇವೆಗಳು, ಅಪಘಾತ ವಿಭಾಗ( Casualty) ಮತ್ತು ತುರ್ತು ಚಿಕಿತ್ಸೆ ವಿಭಾಗಗಳು ಕಾರ್ಯ ನಿರ್ವಹಿಸಲಿವೆ. ಆದರೆ ಉಳಿದಂತೆ ಪ್ರತಿನಿತ್ಯದ ಸೇವೆಗಳು, ನಿರ್ದಿಷ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ ಎಂದು ಐಎಂಎ ತಿಳಿಸಿದೆ.